ಆನೇಕಲ್: ಕೊಳೆತ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಚಂದಾಪುರ ಹೆಡ್ ಮಾಸ್ಟರ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಬಡಾವಣೆಯ ನಾಲ್ಕನೇ ಫ್ಲೋರ್‌ನಲ್ಲಿರುವ ಮನೆಯೊಂದರ ಕೊಠಡಿಯಲ್ಲಿ ನಗ್ನ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ.
ಐದಾರು ದಿನಗಳ ಹಿಂದೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಒರಿಸ್ಸಾ ಮೂಲದ ಸಪನ್ ಕುಮಾರ್ ಎಂಬಾತ ಈ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಯುವತಿ ಈತನ ಜತೆಗಿದ್ದಳು. ಸಪನ್ ಕುಮಾರ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಯುವತಿ ಕೊಲೆಗೈದ ಬಳಿಕ ಸಪನ್ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಲೆಗೂ ಮೊದಲು ಮದ್ಯಪಾನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಜತೆಗೆ ಊಟದ ಪ್ಯಾಕೇಟ್‌ಗಳು ಇವೆ. ಇನ್ನೂ ಕಳೆದ ಐದಾರು ದಿನಗಳಿಂದ ಬಾಗಿಲು ಹಾಕಿದಂತೆ ಇತ್ತು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ ಸ್ಥಳೀಯರು ಕಿಟಕಿಯಿಂದ ನೋಡಿದ್ದಾರೆ.
ಈ ವೇಳೆ ಯುವತಿ ಶವವಾಗಿ ಬಿದ್ದಿರುವುದು ಕಂಡಿದೆ. ಹೀಗಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ನಾಪತ್ತೆಯಾಗಿರುವ ಸಪನ್ ಕುಮಾರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರ ತನಿಖೆಯ ನಂತರವೇ ಹತ್ಯೆ ಯಾಕಾಗಿ ಆಗಿದ್ದು ಎಂಬುದು ತಿಳಿದು ಬರಲಿದೆ.