ಒಕ್ಕಲಿಗರ ಪ್ರಾಬಲ್ಯ ಇರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಯುವ ನಾಯಕ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ನೀಡಲು ಹಲವು ಒಕ್ಕಲಿಗ ಮಠಾಧಿಪತಿಗಳು ಹಾಗೂ ಸಂಘ -ಸಂಸ್ಥೆಗಳಿಂದ ಹಾಗೂ ಸ್ಥಳೀಯ ನಾಯಕರುಗಳಿಂದ ಈಗಾಗಲೇ ಚುನಾವಣಾ ಕಾರ್ಯಕಾರಿ ಸಮಿತಿಯಲ್ಲಿರುವ ಬಿಎಸ್ವೈ ಮೇಲೆ ಒತ್ತಡ ಹೇರಲಾಗಿದೆ. ಬಿ.ಎನ್. ಬಚ್ಚೇಗೌಡರ ಚುನಾವಣಾ ರಾಜಕೀಯ ನಿವೃತ್ತಿಯಿಂದ ಶತಾಯಗತಾಯ ಒಕ್ಕಲಿಗರ ವೋಟ್ ಬ್ಯಾಂಕನ್ನು ಎನ್ಕ್ಯಾಷ್ ಮಾಡಿಕೊಳ್ಳಲು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪ್ರಯತ್ನ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ವಿಶ್ವನಾಥ್ ಕುಟುಂಬ ಮತ ಬೇಟೆಗೆ ಇಳಿದಿದೆ. ಇದರ ಮಧ್ಯೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಸಹ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಕೆಲ ಕೇಂದ್ರ ನಾಯಕರ ಜೊತೆ ಒಡನಾಟ ಹೊಂದಿರುವ ವಿಶ್ವನಾಥ್ ಏನಾದರೂ ಮಾಡಿ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗುವುದು ನಿಶ್ಚಿತ ಎನ್ನುತ್ತಿವೆ ದೆಹಲಿ ಮೂಲಗಳು. ಒತ್ತಡ ತಂತ್ರವನ್ನು ಮುಂದುವರೆಸಿರುವ ಎಸ್.ಆರ್. ವಿಶ್ವನಾಥ್ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಜೊತೆ ದೆಹಲಿಗೆ ತೆರಳಿರುವ ಅವರು ಪುತ್ರನಿಗೆ ಟಿಕೆಟ್ ಪಡೆದುಕೊಂಡೇ ವಾಪಸ್ಸು ಆಗುವ ವಿಶ್ವಾಸದಲ್ಲಿದ್ದಾರೆ.
ತಂದೆಯಂತೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ಅಲೋಕ್ ವಿಶ್ವನಾಥ್, ಬಡ, ಶ್ರಮಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ವಿದ್ಯೆ, ಉದ್ಯೋಗ ಹಾಗೂ ಜೀವನ ಮಟ್ಟ ಸುಧಾರಣೆಗಾಗಿ ದುಡಿಯಲು ನಿರ್ಧರಿಸಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿದ್ದರೂ, ಹಳ್ಳಿ ಜನರ ಸೇವೆ ಮಾಡಲು ಉತ್ಸುಕರಾಗಿರುವ ಅಲೋಕ್ಗೆ ಟಿಕೆಟ್ ಸಿಕ್ಕರೆ ಅತಿಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮುಖಂಡರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಹೇಳುತ್ತಿದ್ದಾರೆ. ಜನರು ಕೂಡಾ ಯುವ ನಾಯಕನ ಬಗ್ಗೆ ಅಪಾರ ಒಲವು ತೋರುತ್ತಿದ್ದಾರೆ.