ಕಲಬುರಗಿ: ದಸರಾ ಹಬ್ಬದ ಸಂಭ್ರಮದಲ್ಲಿಯೇ ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಒಂದೇ ದಿನ ಮೂವರ ದಾರುಣ ಸಾವು ಸಂಭವಿಸಿದೆ. ಹೀಗಾಗಿ ಭೀಮಾ ತೀರದಲ್ಲಿ ಹಬ್ಬದ ಸಂಭ್ರಮ ಮರೆಯಾಗಿದೆ. ಬಟ್ಟೆ ತೊಳೆಯಲು ಹೋದ ಇಬ್ಬರು ಬಾಲಕಿಯರು ಭೀಮಾನದಿ ನೀರು ಪಾಲಾಗಿರುವ ದಾರುಣ ಘಟನೆ ಬನ್ನಟ್ಟಿಯಲ್ಲಿ ಸಂಭವಿಸಿದೆ. ಇನ್ನು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿದ್ಯುತ್ ತಂತಿ ಸರಿಪಡಿಸಲು ಹೋದ ಡಿ ಗ್ರೂಪ್ ಸಿಬ್ಬಂದಿ ಕರಜಗಿ ಆಸ್ಪತ್ರೆಯಲ್ಲಿ ದಾರುಣ ಸಾವನ್ನಪ್ಪಿದ್ದಾನೆ.
ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಬಾಲಕಿಯರಿಬ್ಬರು ನೀರುಪಾಲಾಗಿರುವ ಘಟನೆ ಅಫಜಲಪೂರ ತಾಲೂಕಿನ ಬನ್ನಹಟ್ಟಿ ಗ್ರಾಮದ ಭೀಮಾ ನದಿಯಲ್ಲಿ ನಡೆದಿಗಿದೆ. ಬನ್ನಹಟ್ಟಿ ಗ್ರಾಮದ ಭೂಮಿಕಾ (8) ಮತ್ತು ಶ್ರಾವಣಿ (11) ನೀರುಪಾಲಾಗಿರುವ ಬಾಲಕಿಯರು.
ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಅವಳನ್ನು ಶ್ರಾವಣಿ ರಕ್ಷಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಭೂಮಿಕಾ ಮತ್ತು ಶ್ರಾವಣಿ ಇಬ್ಬರು ನೀರುಪಾಲಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ಶ್ರಾವಣಿಯ ಮೃತದೇಹವನ್ನು ನದಿಯಿಂದ ಮೇಲೆತ್ತಿದ್ದಾರೆ. ಭೂಮಿಕಾಳಿಗಾಗಿ ಶೋಧ ಮುಂದುವರಿದಿದೆ. ಈ ಕುರಿತು ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡ, ಅಗ್ನಿಶಾಮಕ ತಂಡ, ಎಸ್.ಡಿ.ಆರ್.ಎಫ್ ತಂಡದವರಿಂದ ಭೂಮಿಕಾಳ ಮೃತದೇಹ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


