ಕಲಬುರಗಿ : ಕೌಟುಂಬಿಕ ಸಮಸ್ಯೆಯಿಂದಾಗಿ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಧುಮುಕಿದ್ದ ಆಕೆಯ ಪತಿ ಸೇರಿ ಸಂಬಂಧಿಕರೊಬ್ಬರು ಜಲ ಸಮಾಧಿಯಾಗಿರುವ ಘಟನೆ ನಡೆದಿದೆ.
ಅಫಜಲಪುರ ಮತ್ತು ಆಲಮೇಲ ತಾಲೂಕಿನ ನಡುವೆ ಇರುವ ಭೀಮಾ ನದಿಯ ದೇವಣಗಾಂವ ಬ್ರಿಜ್ ಮೇಲಿಂದ ಮಂಗಳವಾರ ಸಂಜೆ ಲಕ್ಷ್ಮಿ ಗುಡ್ಡಡಗಿ (28) ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ರಕ್ಷಣೆ ಮಾಡಲು ನದಿಗೆ ಧುಮುಕಿದ್ದ ಪತಿ ಶಿವ ಕುಮಾರ ಗುಡ್ಡಡಗಿ (36) ಹಾಗೂ ಸಹೋದರ ಸಂಬಂಧಿ ರಾಜಶೇಖರ ಅಂಕಲಗಿ (39) ನೀರಿನ ರಭಸದಿಂದ ದಡಕ್ಕೆ ಬರಲು ಸಾಧ್ಯವಾಗದೆ ನಾಪತ್ತೆಯಾಗಿದ್ದರು.
ಬಳಿಕ ಸೊನ್ನ ಬ್ಯಾರೇಜ್ ಹೊರ ಹರಿವು ಗೇಟ್ ಬಂದ್ ಮಾಡಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕತ್ತಲಾಗಿರುವುದರಿಂದ ರಾತ್ರಿ ಕಾರ್ಯಾಚರಣೆ ಕೈ ಬಿಟ್ಟು ಬುಧವಾರ ಬೆಳಗಿನ ಜಾವ ಪುನಃ ಕಾರ್ಯಾಚರಣೆ ಆರಂಭಿಸಿದಾಗ ಇಂದು 6.30 ಗಂಟೆ ಸುಮಾರಿಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಮಹಿಳೆಯನ್ನು ಮೀನುಗಾರರು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ರಾಜಶೇಖರ ಮತ್ತು ಶಿವಕುಮಾರ ಇಬ್ಬರು ಸಹ ನೀರಿನಲ್ಲಿ ಮುಳುಗುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಾಜಶೇಖರ ಅಂಕಲಗಿ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ, ಶಿವಕುಮಾರ ಗುಡ್ಡಡಗಿ ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ನಿವಾಸಿಯಾಗಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.