ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ರೈತರಿಗಿಂತ ಖರ್ಗೆ ಕುಟುಂಬಕ್ಕೆ ಹೆಚ್ಚು ನಷ್ಟ ಉಂಟಾಗಿದೆ. ನೆರೆ ಬಂದು ನಷ್ಟ ಅನುಭವಿಸುತ್ತಿರುವ ರೈತರಿಗಿಂತ ಮೊದಲು ಖರ್ಗೆ ಪರಿವಾರಕ್ಕೆ ಸರ್ಕಾರ ಪರಿಹಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖರ್ಗೆ ವಿರುದ್ಧ ಲೇವಡಿ ಮಾಡಿದ್ದಾರೆ..
ಸುದ್ದಿ-ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಕೇಳಲು ರೈತರೊಬ್ಬರು ಖರ್ಗೆ ಬಳಿ ಹೋದಾಗ ನಿನ್ನ ನಾಲ್ಕು ಎಕರೆಗಿಂತ ನಂದೂ ನಲವತ್ತು ಎಕರೆ ಬೆಳೆ ಹಾಳಾಗಿದೆ ಎಂದು ಅವಲತ್ತುಕೊಂಡಿದ್ದಾರೆ ಅದಕ್ಕೆ ನಮ್ಮ ಬಳಿಯಲ್ಲಿ ವಿಡಿಯೋ ಸಾಕ್ಷಿ ಇದೆ. ಆದ್ದರಿಂದ ಸರ್ಕಾರ ಮೊದಲು ಅವರಿಗೆ ಪರಿಹಾರ ಕೊಡುವಂತಾಗಲಿ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆ ಮತ್ತು ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ. ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯದ ಇತರೆ ಯಾವುದೇ ಸಚಿವರು ಪ್ರವಾಹ ಪೀಡಿತರ ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸುತ್ತಿಲ್ಲ. ಕೃಷಿ ಸಚಿವರು ಸೇರಿದಂತೆ ಕಂದಾಯ ಸಚಿವರು ಕೂಡಲೇ ಈ ಭಾಗಕ್ಕೆ ಬಂದು ಜನರ ಸಮಸ್ಯೆಗಳಿಗೆ ಕಿವಿಯಾಗಬೇಕಾಗಿತ್ತು ಆದರೆ ಅದು ಸಾಧ್ಯವಾಗಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಆಗಮಿಸುತ್ತಿರುವುದರಿಂದ ವೈಮಾನಿಕ ಸಮೀಕ್ಷೆ ಮಾಡುತ್ತಿರುವುದು ಸರಿ. ಆದರೆ ಪ್ರವಾಹ ಪೀಡಿತ ಪ್ರದೇಶಗಳನ್ನು ತುಸು ಕಣ್ಣಾರೆ ಕಂಡು ಶೀಘ್ರವೇ ತುರ್ತು ಪರಿಹಾರ ಘೋಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ವಿಪಕ್ಷ ನಾಯಕರಾದ ಚಲುವಾದಿ ನಾರಾಯಣಸ್ವಾಮಿ ಗೋವಿಂದ ಕಾರಜೋಳ ಅವರ ಜೊತೆಗೆ ನಾನು ಅಫಜಲಪುರ ಚಿತಾಪುರ ಮತ್ತು ಇತರೆ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸಂತ್ರಸ್ತರು ಜೀವನ ನಡೆಸುವುದು ಕಂಡುಬಂದಿದೆ. ಆದ್ದರಿಂದ ಕೂಡಲೇ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.


