ಹಾಸನ: ಪ್ರಾದೇಶಿಕ ಪಕ್ಷ ಜನತಾದಳ ತನ್ನ ಭದ್ರಕೋಟೆ ಹಾಸನದಲ್ಲಿ ಬೃಹತ್ ‘ಜನತಾ ಸಮಾವೇಶ’ದ ಮೂಲಕ ರಾಜಕೀಯ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಉಪಸ್ಥಿತಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿತು. ಈ ವೇದಿಕೆಯಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾಡಿದ ಅಬ್ಬರದ ಭಾಷಣ ಸಮಾವೇಶದ ಹೈಲೈಟ್ ಆಗಿತ್ತು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಕ್ಷಸ ಸಂಹಾರಕ್ಕೆ ಕುಮಾರಣ್ಣ ಬೇಕು: “ಈ ರಾಜ್ಯವನ್ನು ರಾಕ್ಷಸರು ಮೆಟ್ಟಿ ತಿನ್ನುತ್ತಿದ್ದಾರೆ. ಅವರನ್ನು ತೊಲಗಿಸಿ ರಾಜ್ಯವನ್ನು ಉಳಿಸಲು ಕುಮಾರಣ್ಣ ಮತ್ತೆ ಮುಖ್ಯಮಂತ್ರಿಯಾಗುವುದು ಅನಿವಾರ್ಯ. ನನ್ನ ವಿರುದ್ಧ ಮೂರು ಬಾರಿ ಷಡ್ಯಂತ್ರ ಮಾಡಿ ಸೋಲಿಸಿರಬಹುದು, ಆದರೆ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು, ಸೋಲಿಗೆ ಹೆದರುವವನಲ್ಲ,” ಎಂದು ಸವಾಲು ಹಾಕಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನ ಮತ್ತೆ ಸಿಎಂ ಸ್ಥಾನದಲ್ಲಿ ಕೂರಿಸುವುದೇ ನಮ್ಮೆಲ್ಲರ ಏಕೈಕ ಗುರಿಯಾಗಬೇಕು, ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಹಾಸನವನ್ನು ಜೆಡಿಎಸ್‌ನ ‘ಮಾತೃ ಜಿಲ್ಲೆ’ ಎಂದು ಬಣ್ಣಿಸಿದ ನಿಖಿಲ್, ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪಾತ್ರವನ್ನು ಕೊಂಡಾಡಿದರು.
ಹೃದಯದಿಂದ ರಾಜಕಾರಣ ಮಾಡುವುದು ದೇವೇಗೌಡರು ಮತ್ತು ಕುಮಾರಣ್ಣನಿಗೆ ಮಾತ್ರ ಗೊತ್ತು. ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ ಮಣ್ಣಿನ ಮಗ ದೇವೇಗೌಡರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ,” ಎಂದು ಹೆಮ್ಮೆಯಿಂದ ನುಡಿದರು.
ದ್ರೋಹಿಗಳಿಗೆ ಪಾಠ:
“ನಮ್ಮಲ್ಲೇ ತಿಂದು, ನಮ್ಮಲ್ಲೇ ಬೆಳೆದು ನಮಗೆ ಬೆನ್ನಿಗೆ ಚೂರಿ ಹಾಕಿ ಹೋದವರಿಗೆ ಜನರೇ ಪಾಠ ಕಲಿಸಬೇಕು. ಜೆಡಿಎಸ್ ಮುಗಿಸುತ್ತೇವೆ ಎಂದವರಿಗೆ ಈ ಸಮಾವೇಶವೇ ಸಾಕ್ಷಿ,” ಎಂದು ಕಿಡಿಕಾರಿದರು.
ಮುಂದಿನ ಚುನಾವಣೆಗಳ ಮೇಲೆ ಕಣ್ಣು
ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದ ನಿಖಿಲ್, ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.


