ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಮಧ್ಯೆದಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೈದಾನ ತೊರೆದಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡದ ಹಂಗಾಮಿ ನಾಯಕನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯ ದಿನದಾಟದ ಭೋಜನಾ ವಿರಾಮದ ಬಳಿಕ ಜಸ್ಪ್ರೀತ್ ಬುಮ್ರಾ ಮೈದಾನದಿಂದ ಹೊರ ನಡೆದರು. ಇದಾದ ಬಳಿಕ ಅವರು ಟೀಮ್ ಇಂಡಿಯಾ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಆಸ್ಪತ್ರೆಗೆ ತೆರಳುತ್ತಿರುವುದು ಕಂಡು ಬಂದಿದೆ.
ಟೀಮ್ ಇಂಡಿಯಾಗೆ ಹಿನ್ನಡೆ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಈವರೆಗೆ 32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ನಿರ್ಣಾಯಕ ಪಂದ್ಯದಲ್ಲೂ ಪರಾಕ್ರಮ ಮೆರೆಯುತ್ತಿದ್ದ ಬುಮ್ರಾ ಹೊರನಡೆದಿರುವುದು ಆಸ್ಟ್ರೇಲಿಯಾ ಪಾಲಿಗೆ ಪ್ಲಸ್ ಪಾಯಿಂಟ್.
ಏಕೆಂದರೆ ಸಿಡ್ನಿ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಜಸ್ಪ್ರೀತ್ 2 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾಗೆ ಆಘಾತ ನೀಡಿದ್ದರು. ಇದೀಗ ಬುಮ್ರಾ ಇಲ್ಲದೆ ಭಾರತ ತಂಡವು ದ್ವಿತೀಯ ದಿನದಾಟವನ್ನು ಮುಂದುವರೆಸಿದ್ದು, ಇದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.
ಬ್ಯೂ ವೆಬ್ಸ್ಟರ್ ಅರ್ಧಶತಕ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರಿಷಭ್ ಪಂತ್ 40 ರನ್ ಬಾರಿಸಿದ್ದರು. ಈ ನಲ್ವತ್ತು ರನ್ಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 185 ರನ್ಗಳನ್ನು ಕಲೆಹಾಕಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 96 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಬ್ಯೂ ವೆಬ್ಸ್ಟರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, ಈ ಮೂಲಕ 96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.