ಬೆಂಗಳೂರು: ಆಯುಕ್ತರ ನಡೆ ಕಾರ್ಯಕ್ರಮದಡಿ ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಿದ್ದು, ಈ ವೇಳೆ ಸಾರ್ವಜನಿಕರು, ಒತ್ತುವರಿ, ರಸ್ತೆ ಬದಿ ತ್ಯಾಜ್ಯ ಬಿಸಾಡುವ, ಅನಧಿಕೃತ ಕಟ್ಟಡಗಳ ನಿರ್ಮಾಣ ಸಂಬಂಧಿಸಿದಂತೆ ಹಲವು ದೂರುಗಳನ್ನು ನೀಡಿದರು.

ದಕ್ಷಿಣ ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ತುಷಾರ್ ಗಿರಿನಾಥ್ ಅವರು, 50ಕ್ಕೂ ಹೆಚ್ಚು ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಸಹಾಯ್ 2.0 ಸಾಫ್ಟ್‌ವೇರ್ ಮೂಲಕ ಸ್ವೀಕರಿಸಿದ ದೂರುಗಳಿಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಮತ್ತು ಗಡುವಿನೊಳಗೆ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಇದೇ ವೇಳೆ ಮಾಗಡಿ ರಸ್ತೆಯ ಜಿಟಿ ಮಾಲ್ ಬಳಿ ಅನಧಿಕೃತ ಕಟ್ಟಡಗಳ ನಿರ್ಮಾಣ, ಫುಟ್ ಪಾತ್ ಅತಿಕ್ರಮಣ, ಕುಮಾರಸ್ವಾಮಿ ಲೇಔಟ್ ನ ರಸ್ತೆಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು, ಚರಂಡಿ ಮುಚ್ಚಿಹೋಗಿರುವುದು, ವಿಜಯನಗರದ ಹಂಪಿನಗರ ಪೈಪ್ ಲೈನ್ ರಸ್ತೆಯ ರಾಜಕಾಲುವೆ ಪಕ್ಕದ ಬಫರ್ ಜೋನ್ ನಲ್ಲಿ ಕಟ್ಟಡ ನಿರ್ಮಾಣ ಸೇರಿ ಮತ್ತಿತರ ಸಮಸ್ಯೆಗಳ ಕುರಿತು ನಿವಾಸಿಗಳು ದೂರಿದರು.

ದೂರು ಆಲಿಸಿದ ಆಯುಕ್ತರು, ಕಟ್ಟಡ ಮಂಜೂರಾತಿ ಯೋಜನೆ ಬದಲಿಸಿ ನಿರ್ಮಿಸಿರುವ ಅಥವಾ ಯೋಜನೆಯೇ ಇಲ್ಲದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ರಾಜಕಾಲುವೆ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಖಾಲಿ ನಿವೇಶನಗಳಲ್ಲಿ ಕಸ ಸುರಿಯಲಾಗುತ್ತಿದ್ದು, ಈ ನಿವೇಶನಗಳ ಮಾಲೀಕರೊಂದಿಗೆ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಾಗಿ ವ್ಯವಹರಿಸಬೇಕು. ಖಾಲಿ ನಿವೇಶನಗಳಲ್ಲಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಲು ನೋಟಿಸ್ ಜಾರಿ ಮಾಡಬೇಕು. ಸೂಚನೆ ಪಾಲಿಸದಿದ್ದರೆ, ಪಾಲಿಕೆಯೇ ನಿವೇಶನಗಳನ್ನು ಸ್ವಚ್ಛಗೊಳಿಸಿ ಮಾಲೀಕರಿಂದ ವೆಚ್ಚವನ್ನು ವಸೂಲಿ ಮಾಡಬೇಕು. ಮತ್ತೆ ತ್ಯಾಜ್ಯ ಸುರಿಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.

By Veeresh

Leave a Reply

Your email address will not be published. Required fields are marked *

Verified by MonsterInsights