ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರು ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗದ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜಗ್ಗೇಶ್ ಅವರಿಗೆ ಶುಭಾಶಯ ಕೋರಿದ್ದಾರೆ. ಇನ್ನು ಪ್ರಧಾನಿ ಶುಭ ಕೋರಿ ಬರೆದಿರುವ ಪತ್ರವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಶುಭ ಕೋರಿ ಬರೆದಿರುವ ಪತ್ರ ಹಂಚಿಕೊಂಡಿರುವ ಜಗ್ಗೇಶ್ ಅವರು, “ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ. ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕ ನರೇಂದ್ರ ಮೋದಿ ಅವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ’ ಎಂದು ಬರೆದುಕೊಂಡಿದ್ದಾರೆ.
‘ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದ ಮೇಲೂ ನೆನಪಿಡುವ ಸಾಧನೆಯ ಓಟ ಆಗಿರಬೇಕು. ನನ್ನ ಸಲಹುತ್ತಿರುವ ಪ್ರೀತಿಪಾತ್ರರು ಸರ್ವರಿಗೂ ಧನ್ಯವಾದ” ಎಂದು ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಅವರಿಗೆ ರಾಜಕೀಯ ನಾಯಕರು ಹಾಗೂ ಸಿನಿಮಾ ರಂಗದವರ ಕಡೆಯಿಂದಲೂ ಶುಭಾಶಯಗಳು ಹರಿದುಬಂದಿವೆ