ಮುಂಬಯಿ: ರಾಷ್ಟ್ರೀಯ ತಂಡದ ಗುತ್ತಿಗೆ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡುವುದು ಕಡ್ಡಾಯವೆಂದು ಬಿಸಿಸಿಐ ಸೂಚನೆ ನೀಡಿದ ಹೊರತಾಗಿಯೂ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ಕೊನೆಯ ಲೀಗ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.
ಬ್ಯಾಟಿಂಗ್ ತಾಂತ್ರಿಕತೆಯ ದೋಷ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಇಶನ್ ಕಿಶನ್ ಅವರು ರೆಡ್ಬಾಲ್ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ. ಆದರೆ ಇಶಾನ್ ಈ ಬಗ್ಗೆ ಯಾವುದೇ ಸಮಸ್ಯೆಯನ್ನು ಬಿಸಿಸಿಐ ಗಮನಕ್ಕೆ ತಂದಿಲ್ಲ. ಬದಲಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಫೋನ್ ಕರೆಯನ್ನು ಸ್ವೀಕರಿಸದೆ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದರಿಂದ ಅವರ ವೃತ್ತಿ ಜೀವನ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
ದೇಶಿಯ ಮತ್ತು ರಾಷ್ಟ್ರೀಯ ತಂಡದ ಪರ ಆಡಲು ಆಲಸ್ಯ ತೋರುತ್ತಿರುವ ಇಶಾನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜತೆ ಬರೋಡದಲ್ಲಿ ಸದ್ಯ ಅಭ್ಯಾಸ ನಡೆಸುತ್ತಿದ್ದಾರೆ. ಇದು ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿತ್ತು. ಇದೇ ಕಾರಣಕ್ಕೆ ಬಿಸಿಸಿಐ ಎಲ್ಲ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಆಡಿದರೆ ಮಾತ್ರ ಐಪಿಎಲ್ನಲ್ಲಿ ಅವಕಾಶ ಎನ್ನುವ ನಿಯಮವನ್ನೂ ಜಾರಿಗೆ ತಂದಿದೆ.
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಇಶಾನ್ ತಮ್ಮ ಮಾನಸಿಕ ಯೋಗಕ್ಷೇಮಕ್ಕಾಗಿ ವಿರಾಮವನ್ನು ಬಯಸಿ, ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಹಿಂತಿರುಗಲಿಲ್ಲ. ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತರಬೇತಿ ನಡೆಸುತ್ತಿದ್ದಾರೆ. ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರು ಇಶಾನ್ ಕಿಶನ್ ಕ್ರಿಕೆಟ್ ಆಡಿ ಬರಬೇಕು ಎಂಬ ಮಾತಿನ ಹೊರತಾಗಿಯೂ ಅವರು ರಣಜಿ ಟ್ರೋಫಿ ಪಂದ್ಯಗಳನ್ನು ಕಳೆದುಕೊಳ್ಳುವುದನ್ನು ಮುಂದುವರೆಸಿದ್ದಾರೆ.