ನಾವು ಯಾವುದನ್ನಾದರೂ ಯೋಚಿಸಬೇಕಾದರೆ ನಮ್ಮ ಮೆದುಳನ್ನು ಬಳಸುತ್ತೇವೆ ಅಂತ ನಮಗೆಲ್ಲಾ ಗೊತ್ತು. ಆದರೆ ನಿಮಗೆ ಗೊತ್ತಾ? ನಮ್ಮ ದೇಹದಲ್ಲಿ ತಲೆಯಲ್ಲಿರೋ ಮೆದುಳಲ್ಲದೆ, ಹೊಟ್ಟೆಯೊಳಗೂ ಒಂದು ಮೆದುಳು ಇದೆ. ಇದನ್ನ ವಿಜ್ಞಾನಿಗಳು “ಎರಡನೇ ಮೆದುಳು” (The Second Brain) ಅಂತಲೇ ಕರೆಯುತ್ತಾರೆ.ಕೋಟಿಗೂ ಹೆಚ್ಚು ನರಕೋಶಗಳಿವೆ. ಇಷ್ಟು ನರಕೋಶಗಳು ಬೇರೆ ಯಾವ ಅಂಗದಲ್ಲೂ ಇಲ್ಲ. ಇದು ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನ ಹೊಂದಿದೆ.

ಸಾಮಾನ್ಯವಾಗಿ ನಮ್ಮ ದೇಹದ ಎಲ್ಲಾ ಅಂಗಗಳು ಮೆದುಳಿನ ಆದೇಶಕ್ಕಾಗಿ ಕಾಯುತ್ತವೆ. ಆದರೆ ಈ “ಹೊಟ್ಟೆಯ ಮೆದುಳು” ಹಾಗಲ್ಲ. ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಇದು ತಲೆಯಲ್ಲಿರೋ ಮೆದುಳಿನ ಸಹಾಯವಿಲ್ಲದೆಯೇ ಸ್ವತಂತ್ರವಾಗಿ ಮಾಡುತ್ತದೆ. ನಾವು ತಿಂದ ಆಹಾರವನ್ನು ಹೇಗೆ ಜೀರ್ಣಿಸಿಕೊಳ್ಳಬೇಕು, ಯಾವ ಎನ್ಜೈಮ್‌ಗಳನ್ನು ಬಿಡುಗಡೆ ಮಾಡಬೇಕು ಅನ್ನೋದನ್ನ ಇದು ತಾನೇ ನಿರ್ಧರಿಸುತ್ತದೆ.

ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಇದೆ! ನಮಗೆ ಏನಾದರೂ ಭಯವಾದಾಗ ಅಥವಾ ಎಕ್ಸಾಂ ಬರೆಯುವ ಮುನ್ನ ಹೊಟ್ಟೆಯಲ್ಲಿ ಏನೋ ಒಂತರ ಸಂಕಟ ಆಗುತ್ತೆ ಅಥವಾ ಖುಷಿಯಾದಾಗ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದ ಅನುಭವ ಆಗುತ್ತೆ ಅಲ್ವಾ ಇದಕ್ಕೆ ಕಾರಣ ಈ ಎರಡನೇ ಮೆದುಳು. ನಮ್ಮ ಮೆದುಳು ಮತ್ತು ಹೊಟ್ಟೆಯ ಮೆದುಳು ಸದಾ ಪರಸ್ಪರ ಮಾತನಾಡುತ್ತಲೇ ಇರುತ್ತವೆ.
ಅಷ್ಟೇ ಅಲ್ಲ, ನಮ್ಮ ಮನಸ್ಸನ್ನು ಶಾಂತವಾಗಿರಿಸುವ ‘ಸೆರೊಟೋನಿನ್’ ಎಂಬ ಹಾರ್ಮೋನ್‌ನ ಶೇಕಡಾ 90 ರಷ್ಟು ಭಾಗ ಉತ್ಪತ್ತಿಯಾಗುವುದು ನಮ್ಮ ಹೊಟ್ಟೆಯಲ್ಲೇ! ಅಂದರೆ ನಿಮ್ಮ ಹೊಟ್ಟೆ ಆರೋಗ್ಯವಾಗಿದ್ದರೆ ಮಾತ್ರ ನಿಮ್ಮ ಮನಸ್ಸು ಖುಷಿಯಾಗಿರಲು ಸಾಧ್ಯ.
ಅದಕ್ಕೇ ಹಿರಿಯರು ಹೇಳೋದು “ಹೊಟ್ಟೆ ತಣ್ಣಗಿದ್ದರೆ ಜಗತ್ತೇ ತಣ್ಣಗಿರುತ್ತೆ” ಅಂತ. ನಮ್ಮ ಎರಡನೇ ಮೆದುಳು ನಮ್ಮ ಆರೋಗ್ಯ ಮತ್ತು ಸಂತೋಷ ಎರಡನ್ನೂ ನಿಯಂತ್ರಿಸುತ್ತದೆ. ಹಾಗಾಗಿ ನಿಮ್ಮ ಹೊಟ್ಟೆಯನ್ನು ಚೆನ್ನಾಗಿ ನೋಡಿಕೊಳ್ಳಿ.


