Thursday, January 29, 2026
22.8 C
Bengaluru
Google search engine
LIVE
ಮನೆ#Exclusive Newsಇರಾನ್‌ ದೇಶದಿಂದ ನನಗೆ ಜೀವ ಬೆದರಿಕೆ: ಡೊನಾಲ್ಡ್‌ ಟ್ರಂಪ್

ಇರಾನ್‌ ದೇಶದಿಂದ ನನಗೆ ಜೀವ ಬೆದರಿಕೆ: ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್ ಡಿಸಿ:ಡೊನಾಲ್ಡ್‌ ಟ್ರಂಪ್ ಅವರ ಹತ್ಯೆಗೆ ಇರಾನ್ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕದ ಬೇಹುಗಾರಿಕಾ ದಳ ಖಚಿತ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷರೂ ಆಗಿರುವ ಡೊನಾಲ್ಡ್‌ ಟ್ರಂಪ್, ಮಧ್ಯ ಪ್ರಾಚ್ಯದ ದೇಶವಾದ ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಈ ಕುರಿತಾಗಿ ತಮ್ಮದೇ ಆದ ಟ್ರೂತ್ ಸೋಷಿಯಲ್ ಎಂಬ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಬರೆದುಕೊಂಡಿರುವ ಡೊನಾಲ್ಡ್‌ ಟ್ರಂಪ್, ನನ್ನನ್ನು ಹತ್ಯೆ ಮಾಡಲು ಇರಾನ್ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಇರಾನ್ ದೇಶವನ್ನು ಭೂಪಠದಿಂದಲೇ ಅಳಿಸಿ ಹಾಕಲಿದೆ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಆ ರೀತಿ ಆಗದಿದ್ದರೆ ಅಮೆರಿಕ ದೇಶದ ನಾಯಕರು ಹೇಡಿಗಳು, ಧೈರ್ಯ ಇಲ್ಲದವರು ಎಂದು ಭಾವಿಸಬೇಕಾಗುತ್ತದೆ ಎಂದು ಅತ್ಯಂತ ಖಾರವಾಗಿ ಬರೆದುಕೊಂಡಿದ್ದಾರೆ.ನೀವು ಯಾವುದೇ ತಪ್ಪು ಮಾಡಬೇಡಿ. ಇರಾನ್‌ನ ಉಗ್ರಗಾಮಿ ನಾಯಕರಿಗೆ ಕಮಲಾ ಹ್ಯಾರಿಸ್ ಅವರ ಬಲ ಹೀನತೆಗಳು ಗೊತ್ತು. ನನ್ನ ಶಕ್ತಿ ಕೂಡಾ ಇರಾನ್‌ಗೆ ಗೊತ್ತು. ಅಮೆರಿಕ ದೇಶದ ಜನರಿಗಾಗಿ ಹಾಗೂ ಅಮೆರಿಕವನ್ನು ಮತ್ತೊಮ್ಮೆ ಮಹಾನ್ ದೇಶ ಮಾಡುವ ನನ್ನ ಪ್ರಯತ್ನವನ್ನು ಯಾರೂ ತಡೆಯಲಾಗದು ಅನ್ನೋದೂ ಇರಾನ್‌ಗೆ ಗೊತ್ತಿದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.ಇದಕ್ಕೂ ಮುನ್ನ ತಮ್ಮ ಪ್ರಚಾರ ಸಭೆಗಳಲ್ಲೂ ಇರಾನ್‌ನ ಪ್ರಸ್ತಾಪ ಮಾಡಿದ್ದ ಡೊನಾಲ್ಡ್‌ ಟ್ರಂಪ್, ಇರಾನ್ ದೇಶವು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ, ಅಸ್ಥಿರತೆ ಉಂಟು ಮಾಡಲು ಬಯಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.ಡೊನಾಲ್ಡ್‌ ಟ್ರಂಪ್ ಅವರಿಗೆ ಅಮೆರಿಕದ ರಾಷ್ಟ್ರೀಯ ಬೇಹುಗಾರಿಕಾ ಪಡೆಯ ನಿರ್ದೇಶಕರು ಬುಧವಾರ ಬೆಳಗ್ಗೆ ಇರಾನ್‌ನ ಕುತಂತ್ರದ ಕುರಿತು ಮಾಹಿತಿ ನೀಡಿದ್ದರು. ಡೊನಾಲ್ಡ್‌ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನ ಮಾಡುತ್ತಿರೋದಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಸ್ಥಿರತೆ ಮೂಡಿಸಿ, ಅಮೆರಿಕ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಇರಾನ್ ಬಯಸುತ್ತಿದೆ ಎಂದು ಟ್ರಂಪ್ ಅವರ ಪ್ರಚಾರ ವಿಭಾಗದ ನಿರ್ದೇಶಕರಾದ ಸ್ಟೀವನ್ ಅವರು ಆರೋಪ ಮಾಡಿದ್ದರು.ಟ್ರಂಪ್ ಅವರ ಮೇಲೆ ಈಗಾಗಲೇ ಎರಡು ಬಾರಿ ಹತ್ಯೆ ಯತ್ನ ನಡೆದಿದೆ. ಮೊದಲ ಬಾರಿ ಪೆನ್ಸಲ್ವೇನಿಯಾ ರಾಜ್ಯದಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು. ಈ ಗುಂಡು ಟ್ರಂಪ್ ಅವರ ಕಿವಿಯನ್ನು ಸೀಳಿಕೊಂಡು ಹೋಗಿತ್ತು. ಮತ್ತೊಂದು ಬಾರಿಯೂ ಟ್ರಂಪ್ ಹತ್ಯೆ ಯತ್ನ ನಡೆದಿತ್ತಾದರೂ ಭದ್ರತಾ ಪಡೆಗಳು ತಡೆದಿದ್ದವು. ಆದರೆ, ಎರಡೂ ಕೃತ್ಯಗಳಲ್ಲಿ ಇರಾನ್‌ನ ಕೈವಾಡ ಸಾಬೀತು ಆಗಿರಲಿಲ್ಲ. ಆದರೆ ಟ್ರಂಪ್ ಮೇಲೆ ದಾಳಿ ನಡೆಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments