ದೇಶ/ವಿದೇಶ

ಆಸ್ಕರ್ ಅವಾರ್ಡ್‌ಗೆ ಇರಾನ್ ಡ್ರೋನ್ ದಾಳಿ ಭೀತಿ;ಭದ್ರತೆ ಹೆಚ್ಚಿಸಿದ ಪೊಲೀಸರು!

ಅಮೆರಿಕ: ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2026ರ ಆಸ್ಕರ್ ಅವಾರ್ಡ್ ಸಮಾರಂಭಕ್ಕೆ ಭದ್ರತಾ ಎಚ್ಚರಿಕೆ ನೀಡಲಾಗಿದೆ. ಇರಾನ್‌ನಿಂದ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಅಮೆರಿಕದ ಅಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಹಾಲಿವುಡ್ ಸ್ಟುಡಿಯೋದಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ 98ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಜಗತ್ತಿನ ಅತಿದೊಡ್ಡ ಪ್ರಶಸ್ತಿ ಸಮಾರಂಭವೆಂದು ಪರಿಗಣಿಸಲ್ಪಡುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಅನೇಕ ಖ್ಯಾತ ನಟರು, ನಿರ್ದೇಶಕರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಹಿನ್ನೆಲೆ ಡ್ರೋನ್ ದಾಳಿ ಸಂಭವಿಸಬಹುದೆಂಬ ಎಚ್ಚರಿಕೆ ನೀಡಲಾಗಿದೆ. ಎಫ್‌ಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಸಮಾರಂಭ ನಡೆಯುವ ಸ್ಥಳದ ಸುತ್ತ ಭದ್ರತೆ ಹೆಚ್ಚಿಸಲು ಸೂಚನೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಶ್ಚಿಮ ಕರಾವಳಿಯತ್ತ ಡ್ರೋನ್ ದಾಳಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಸ್ಕರ್ ಸಮಾರಂಭದ ವೇಳೆ ಯಾವುದೇ ಅಪ್ರಿಯ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button