IPL 2026 ಹಬ್ಬ ಶುರು; ಚಿನ್ನಸ್ವಾಮಿಯಲ್ಲಿ ಆರ್ಸಿಬಿ Vs ಎಸ್ಆರ್ಹೆಚ್ ಓಪನಿಂಗ್ ಮ್ಯಾಚ್!

ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಮೊದಲ ಹಂತದ ವೇಳಾಪಟ್ಟಿ ಪ್ರಕಟಗೊಂಡಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 28ರ ಶನಿವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸುವ ಮೂಲಕ ಈ ಬಾರಿಯ ಸೀಸನ್ಗೆ ಅದ್ಧೂರಿ ಚಾಲನೆ ನೀಡಲಿದೆ.

ಮಾರ್ಚ್ 29ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುವಾಹಟಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿಯ ಫೈನಲಿಸ್ಟ್ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಮುಲ್ಲನ್ಪುರದಲ್ಲಿ ಎದುರಿಸಲಿದೆ. ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ನಾಲ್ಕು ಡಬಲ್ ಹೆಡರ್ ಪಂದ್ಯಗಳು ಸೇರಿವೆ.
ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ ಹಂತದ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಮಂಡಳಿ ತಿಳಿಸಿದೆ. ಈ ಬಾರಿ ಆರ್ಸಿಬಿ ತಂಡವು ತನ್ನ ಏಳು ತವರು ಪಂದ್ಯಗಳ ಪೈಕಿ ಐದನ್ನು ಬೆಂಗಳೂರಿನಲ್ಲಿ ಮತ್ತು ಎರಡನ್ನು ರಾಯ್ಪುರದಲ್ಲಿ ಆಡಲಿದೆ.

ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡವು ನ್ಯೂ ಚಂಡೀಗಢದಲ್ಲಿ ನಾಲ್ಕು ಮತ್ತು ಧರ್ಮಶಾಲಾದಲ್ಲಿ ಮೂರು ಪಂದ್ಯಗಳನ್ನು ಆಡಲಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಮೂರು ಮತ್ತು ಜೈಪುರದಲ್ಲಿ ನಾಲ್ಕು ತವರು ಪಂದ್ಯಗಳನ್ನು ಆಡಲಿದೆ. ಆರ್ಸಿಬಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಈಗಿನಿಂದಲೇ ಮನೆಮಾಡಿದೆ.




