ದುಬೈನಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಜನಪ್ರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ನಟ ದುನಿಯಾ ವಿಜಯ್ ವೇದಿಕೆಯಲ್ಲೇ ಕೋಪಗೊಂಡಿದ್ದಾರೆ.
ಸೈಮಾ 2025 ಪ್ರಶಸ್ತಿ ವಿತರಣೆ ಸಮಾರಂಭ ದುಬೈನಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯ ನಟ-ನಟಿಯರು ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ನೀಡಲಾಗಿದೆ. ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಕನ್ನಡದ ನಟರನ್ನು ಕಡೆಗಣಿಸಲಾಗಿದೆ ಅನ್ನೋದು ದುನಿಯಾ ವಿಜಿ ಆರೋಪ. ಯಾರೂ ಇಲ್ಲದಿದ್ದಾಗ ಸ್ಟೇಜ್ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟು ಸರಿ? ಕನ್ನಡ ಮೇಲಿದೆ ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮದಲ್ಲಿ ಈ ರೀತಿ ಮಾಡಬೇಡಿ. ಹೀಗಾದ್ರೆ ಇನ್ಮುಂದೆ ನಾವ್ಯಾರೂ ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನ ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರ್ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ದುನಿಯಾ ವಿಜಯ್ ಕನ್ನಡ ಪರ ದನಿಗೆ ದುಬೈ ಕನ್ನಡಿಗರು ಬಹುಪರಾಕ್ ಹೇಳಿದ್ದಾರೆ. ವಿಜಯ್ ನಂತರ ಕಿಚ್ಚ ಸುದೀಪ್ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಸುದೀಪ್ ಪರವಾಗಿ ವಿ.ನಾಗೇಂದ್ರ ಪ್ರಸಾದ್ ಸ್ವೀಕರಿಸಿದಾಗಲೂ ಯಾರೂ ಇರಲಿಲ್ಲ. ದುನಿಯಾ ವಿಜಯ್ ಅವರಿಗೆ ‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಘೋಷಣೆಯಾಯ್ತು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ದುನಿಯಾ ವಿಜಯ್ ಅಲ್ಲಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.