
ಭಾರತದ ರಕ್ಷಣಾ ವಲಯವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಬಜೆಟ್ ಅನ್ನು ಬರೋಬ್ಬರಿ 7.85 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಿದ್ದು, ಇದು ದೇಶದ ಒಟ್ಟು ಜಿಡಿಪಿಯ ಸರಿಸುಮಾರು 11% ರಷ್ಟಿದೆ.
ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ಶಸ್ತ್ರಾಸ್ತ್ರಗಳ ಖರೀದಿ ಮತ್ತು ತಂತ್ರಜ್ಞಾನದ ಅಳವಡಿಕೆಗಾಗಿ 2.19 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 21.84 ರಷ್ಟು ಭಾರಿ ಏರಿಕೆಯಾಗಿದೆ. ಕಳೆದ ವರ್ಷ (2025-26) ರಕ್ಷಣಾ ಸಚಿವಾಲಯದ ಬಂಡವಾಳ ವೆಚ್ಚ 1.8 ಲಕ್ಷ ಕೋಟಿ ರೂ.ಗಳಷ್ಟಿತ್ತು .
ವಾಯುಪಡೆಯ ಬಲವರ್ಧನೆಗೆ ವಿಶೇಷ ಆಧ್ಯತೆ ನೀಡಲಾಗಿದ್ದು, ವಿಮಾನಗಳು ಮತ್ತು ಏರೋ ಎಂಜಿನ್‌ಗಳಿಗಾಗಿಯೇ 63,733 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಕೇವಲ ಹೊಸ ಖರೀದಿ ಮಾತ್ರವಲ್ಲದೆ, ಸೇನೆಯ ದಿನನಿತ್ಯದ ನಿರ್ವಹಣೆ, ಮದ್ದುಗುಂಡುಗಳು, ಇಂಧನ ಮತ್ತು ಸಿಬ್ಬಂದಿಯ ಸಂಬಳದಂತಹ ಕಾರ್ಯಾಚರಣೆಯ ವೆಚ್ಚಗಳನ್ನು ಶೇ. 17.24 ರಷ್ಟು ಹೆಚ್ಚಿಸಲಾಗಿದೆ. ಅಲ್ಲದೆ, ನಿವೃತ್ತ ಸೈನಿಕರ ಪಿಂಚಣಿ ಹಂಚಿಕೆಯನ್ನು ಶೇ. 6.53 ರಷ್ಟು ಏರಿಸಿ 1.71 ಲಕ್ಷ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.
‘ಆತ್ಮನಿರ್ಭರ ಭಾರತ’ ಯೋಜನೆಗೆ ಮತ್ತಷ್ಟು ವೇಗ ನೀಡಲು, ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಪೂರ್ಣವಾಗಿ ಮನ್ನಾ ಮಾಡಲಾಗಿದೆ. ಇದರಿಂದ ದೇಶೀಯವಾಗಿ ರಕ್ಷಣಾ ಉಪಕರಣಗಳ ಉತ್ಪಾದನಾ ವೆಚ್ಚ ತಗ್ಗಲಿದ್ದು, ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬನೆಯತ್ತ ದಾಪುಗಾಲು ಇಡಲು ಸಹಕಾರಿಯಾಗಲಿದೆ.




