
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ ಟಿ20 ವಿಶ್ವಕಪ್ ಮಹಾಫೈನಲ್‌ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುತ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳ ದಂಡು ಗುಜರಾತ್‌ನತ್ತ ಮುಖ ಮಾಡಿದೆ. ಅಹಮದಾಬಾದ್‌ಗೆ ಅಭಿಮಾನಿಗಳ ಲಗ್ಗೆ ಇಡುತ್ತಿರುವ ಬೆನ್ನಲ್ಲೇ, ಅಲ್ಲಿನ ಹೋಟೆಲ್ ಉದ್ಯಮದಲ್ಲಿ ಬೆಲೆ ಏರಿಕೆಯ ಸುನಾಮಿ ಎದ್ದಿದೆ. ಸಾಮಾನ್ಯ ದಿನಗಳಲ್ಲಿ 10,000 ರೂಪಾಯಿಗೆ ಸಿಗುತ್ತಿದ್ದ ಹೋಟೆಲ್ ಕೊಠಡಿಗಳ ದರ ಈಗ ಐದರಿಂದ ಎಂಟು ಪಟ್ಟು ಹೆಚ್ಚಾಗಿದ್ದು, ಒಂದು ರಾತ್ರಿಗೆ ಬರೋಬ್ಬರಿ 40,000 ದಿಂದ 75,000 ರೂಪಾಯಿ ತಲುಪಿದೆ.
ಮಾರ್ಚ್ 8 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ನಗರದ ಪ್ರತಿಷ್ಠಿತ ಹೋಟೆಲ್‌ಗಳಾದ ಹಯಾತ್ ರೀಜೆನ್ಸಿ, ಮ್ಯಾರಿಯಟ್, ಐಟಿಸಿ ಮತ್ತು ಫಾರ್ಚೂನ್ ಹೋಟೆಲ್‌ಗಳಲ್ಲಿ ದರಗಳು ಮುಗಿಲು ಮುಟ್ಟಿವೆ. ಕೇವಲ ಹೋಟೆಲ್ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್‌ಗೆ ತೆರಳುವ ವಿಮಾನ ಟಿಕೆಟ್ ದರಗಳೂ ಕೂಡ ಭಾರೀ ಏರಿಕೆ ಕಂಡಿವೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೂ ಇದೇ ರೀತಿಯ ದರ ಏರಿಕೆಯಾಗಿತ್ತು, ಈಗ ಮತ್ತೊಮ್ಮೆ ಟೀಂ ಇಂಡಿಯಾ ಫೈನಲ್ ತಲುಪಿರುವುದು ಹೋಟೆಲ್ ಮಾಲೀಕರಿಗೆ ಲಾಭದ ಸುರಿಮಳೆ ತಂದಿದೆ.
ಕ್ರೀಡಾಂಗಣದಲ್ಲಿ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ರೂಮ್‌ಗಳ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ದರಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕ್ರಿಕೆಟ್ ಪ್ರೇಮಿಗಳಿಗೆ ಫೈನಲ್ ಪಂದ್ಯದ ಸಂಭ್ರಮ ಒಂದೆಡೆಯಾದರೆ, ಈ ಭಾರೀ ವೆಚ್ಚದ ಪ್ರಯಾಣ ಮತ್ತು ವಾಸ್ತವ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಅಹಮದಾಬಾದ್ ಈಗ ವಿಶ್ವದ ಅತಿದೊಡ್ಡ ಕ್ರಿಕೆಟ್ ಹಬ್ಬದ ಜೊತೆಗೆ ಅತಿ ದುಬಾರಿ ನಗರವಾಗಿಯೂ ಬದಲಾಗಿದೆ.



