Wednesday, April 30, 2025
24 C
Bengaluru
LIVE
ಮನೆ#Exclusive NewsTop Newsಸೂರ್ಯನ ಆರ್ಭಟಕ್ಕೆ ಲಂಕಾ ದಹನ – ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು

ಸೂರ್ಯನ ಆರ್ಭಟಕ್ಕೆ ಲಂಕಾ ದಹನ – ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು

ಕೊಲಂಬೊ: ಜಿದ್ದಾ-ಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 43 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶದೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ.

ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಅಬ್ಬರಿಸುತ್ತಿದ್ದ ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವುದು ಭಾರತ ತಂಡಕ್ಕೆ ಸವಾಲಾಗಿತು. ಲಂಕಾ 14 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 140 ರನ್‌ ಬಾರಿಸಿತ್ತು. 15ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್‌ ಪಟೇಲ್‌ 9 ರನ್‌ ಬಿಟ್ಟುಕೊಟ್ಟರೂ ಪ್ರಮುಖ 2 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಇಲ್ಲಿಂದ ಲಂಕಾ ತಂಡದ ಪಥನ ಶುರುವಾಯಿತು.

ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 213 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿ ಅಬ್ಬರಿಸಿದರೂ 170 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಚೇಸಿಂಗ್‌ ಆರಂಭಿಸಿದ ಶ್ರೀಲಂಕಾ ತಂಡ ಉತ್ತಮ ಜೊತೆಯಾಟ ನೀಡುವಲ್ಲಿ ಯಶಸ್ವಿಯಾಗಿತ್ತು. ಮೊದಲ ವಿಕೆಟ್‌ಗೆ ಕುಸಲ್‌ ಮೆಂಡಿಸ್‌ ಹಾಗೂ ಪಥುಮ್‌ ನಿಸ್ಸಾಂಕ ಜೋಡಿ 52 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಕುಸಾಲ್ ಮೆಂಡಿಸ್ 27 ಎಸೆತಗಳಲ್ಲಿ 45 ರನ್‌ ಸಿಡಿಸಿದ್ದರು. ಈ ವೇಳೆ ಅರ್ಷ್‌ದೀಪ್‌ ಸಿಂಗ್‌ ಮೆಂಡಿಸ್‌ ಆಟಕ್ಕೆ ಬ್ರೇಕ್‌ ಹಾಕಿ ಪೆವಿಲಿಯನ್‌ ದಾರಿ ತೋರಿದರು.

ಇನ್ನೂ 2ನೇ ವಿಕೆಟ್‌ಗೆ ಜೊತೆಯಾಗಿದ್ದ ಕುಸಲ್‌ ಪೆರೇರಾ ಹಾಗೂ ನಿಸ್ಸಾಂಕ ಜೋಡಿ ಸಹ 33 ಎಸೆತಗಳಲ್ಲಿ 56 ರನ್‌ ಬಾರಿಸಿತ್ತು. ಒಂದಂಥದಲ್ಲಿ ಭಾರತ ಸೋತೇಬಿಡುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ ಸಂಘಟಿತ ಪ್ರದರ್ಶನ ನೀಡಿದ ಭಾರತದ ಬೌಲರ್‌ಗಳು ಲಂಕಾ ಬ್ಯಾಟರ್‌ಗಳ ಆರ್ಭಟವನ್ನು ಅಡಗಿಸಿದರು. ನಿಸ್ಸಾಂಕ, ಪೆರೇರಾ ಜೋಡಿ ವಿಕೆಟ್‌ ಪತನದೊಂದಿಗೆ ಲಂಕಾ ಅವನತಿ ಶುರುವಾಯಿತು. ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿ ಪೆವಿಲಿಯನ್‌ ಪೆರೇಡ್‌ ನಡೆಸಲು ಲಂಕನ್ನರು ಶುರು ಮಾಡಿದರು. ಅಂತಿಮವಾಗಿ ಲಂಕಾ 170 ರನ್‌ಗಳಿಗೆ ಆಲೌಟ್‌ ಆಯಿತು.

ಶ್ರೀಲಂಕಾ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪಥುಮ್‌ ನಿಸ್ಸಾಂಕ 79 ರನ್‌ (48 ಎಸೆತ, 4 ಸಿಕ್ಸರ್‌, 7 ಬೌಂಡರಿ), ಮೆಂಡಿಸ್‌ 45 ರನ್‌ (27 ಎಸೆತ, 1 ಸಿಕ್ಸರ್‌, 7 ಬೌಂಡರಿ), ಕುಸಾಲ್‌ ಪೆರೇರಾ 20 ರನ್‌ ಹಾಗೂ ಕುಮುಂಡು ಮೆಂಡಿಸ್‌ 12 ರನ್‌ ಕೊಡುಗೆ ನೀಡಿದರು.

ಟೀಂ ಇಂಡಿಯಾ ಪರ 1.5 ಓವರ್‌ಗಳಲ್ಲಿ ಕೇವಲ 5 ರನ್‌ ಬಿಟ್ಟುಕೊಟ್ಟ ರಿಯಾನ್‌ ಪರಾಗ್‌ 3 ವಿಕೆಟ್‌ ಕಿತ್ತರೆ, ಅರ್ಷ್‌ದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಬ್ಯಾಟರ್‌ಗಳು ಅಬ್ಬರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಜೋಡಿ ಮೊದಲ ವಿಕೆಟ್​ಗೆ 36 ಎಸೆತಗಳಲ್ಲಿ ಸ್ಫೋಟಕ 76 ರನ್‌ ಬಾರಿಸಿತ್ತು. ಶುಭಮನ್‌ ಗಿಲ್‌ 16 ಎಸೆತಗಳಲ್ಲಿ 34 ರನ್‌ ಚಚ್ಚಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 20 ಎಸೆತಗಳಲ್ಲಿ 40 ರನ್‌ ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಲಂಕನ್ನರನ್ನು ಚೆಂಡಾಡಿದ ಸೂರ್ಯಕುಮಾರ್‌ ಯಾದವ್‌ ಹಾಗೂ ರಿಷಭ್‌ ಪಂತ್‌ ಜೋಡಿ 3ನೇ ವಿಕೆಟ್‌ಗೆ 43 ಎಸೆತಗಳಲ್ಲಿ 76 ರನ್‌ ಪೇರಿಸಿತ್ತು. ಪರಿಣಾಮ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಟೀಂ ಇಂಡಿಯಾ ಪರ ನಾಯಕ ಸೂರ್ಯಕುಮಾರ್‌ ಯಾದವ್‌ 58 ರನ್‌ (26 ಎಸೆತ, 2 ಸಿಕ್ಸರ್‌, 8 ಬೌಂಡರಿ), ರಿಷಭ್‌ ಪಂತ್‌ 49 ರನ್‌ (33 ಎಸೆತ, 1 ಸಿಕ್ಸರ್‌, 6 ಬೌಂಡರಿ), ಯಶಸ್ವಿ ಜೈಸ್ವಾಲ್‌ 40 ರನ್‌ ಹಾಗೂ ಶುಭಮನ್‌ ಗಿಲ್‌ 34 ರನ್‌ ಬಾರಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments