ಗಾಂಧಿನಗರ: ದೇಶದ ಒಂದು ಇಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯ ಗುಜರಾತ್‌ನ ಕಚ್ ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಅವರು ಮಾತನಾಡಿದರು. 21ನೇ ಶತಮಾನದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೇನೆ ಮತ್ತು ಭದ್ರತಾ ಪಡೆಗಳನ್ನು ಆಧುನಿಕ ಸಂಪನ್ಮೂಲಗಳೊಂದಿಗೆ ಸಜ್ಜುಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.
ʼʼಸರ್ಕಾರವು ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸಲು ಮುಂದಾಗಿದೆ. ಜತೆಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತಿದೆʼʼ ಎಂದು ಅವರು ವಿವರಿಸಿದ್ದಾರೆ. ʼʼನಾವಿಂದು ಅಭಿವೃದ್ಧಿ ಹೊಂದಿದ ಭಾರತ ಗುರಿಯನ್ನು ಸಾಧಿಸಲು ದಾಪುಗಾಲು ಇಡುತ್ತಿದ್ದೇವೆ. ನಮ್ಮ ಈ ಕನಸುಗಳನ್ನು ನೀವು ಕಾಪಾಡುತ್ತಿದ್ದೀರಿʼʼ ಎಂದು ಅವರು ಸೈನಿಕರ ಸೇವೆಯನ್ನು ಸ್ಮರಿಸಿದ್ದಾರೆ.
ವಿಶ್ವಾದ್ಯಂತ ದೀಪಾವಳಿ ಸಂಭ್ರಮ ಆರಂಭವಾಗಿದೆ. ಭಾರತ ಸೇರಿದಂತೆ ವಿವಿಧ ಕಡೆ ಆಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಪ್ರಧಾನಿ ಮೋದಿ ಅವರು ಗುರುವಾರ ಗುಜರಾತ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ದೀಪದ ಹಬ್ಬವನ್ನು ಆಚರಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯ ಗುಜರಾತ್‌ನ ಕಚ್‌ಗೆ ತೆರಳಿದ ಮೋದಿ ಅವರು ಸೈನಿಕರಿಗೆ ಸಿಹಿ ನೀಡಿ ಹಬ್ಬದ ಖುಷಿಯನ್ನು ಹೆಚ್ಚಿಸಿದ್ದಾರೆ.
Celebrating Diwali with our brave Jawans in Kutch, Gujarat.https://t.co/kr3dChLxKB
— Narendra Modi (@narendramodi) October 31, 2024
ಕಚ್ ಭೇಟಿಯ ವೇಳೆ ಸರ್ ಕ್ರೀಕ್‌ನ ಲಕ್ಕಿ ನಾಲಾಕ್ಕೆ ತೆರಳಿದ ಮೋದಿ ಯೋಧರೊಂದಿಗೆ ಕೆಲವು ಹೊತ್ತು ಸಮಯ ಕಳೆದು ದೀಪಾವಳಿ ಆಚರಿಸಿದರು. ಈ ವೇಳೆ ತಮ್ಮ ಕೈಯಾರೆ ಯೋಧರಿಗೆ ಸಿಹಿ ತಿನ್ನಿಸಿದರು. ಲಕ್ಕಿ ನಾಲಾ ಸರ್ ಕ್ರೀಕ್‌ನ ಕ್ರೀಕ್ ಕಾಲುವೆಯ ಒಂದು ಭಾಗ. ಇದು ಕೊಲ್ಲಿ ಗಡಿಯ ಪ್ರಾರಂಭದ ಬಿಂದುವಾಗಿದ್ದು, ಜವುಗು ಪ್ರದೇಶವಾಗಿದೆ. ಇಲ್ಲಿ ಗಸ್ತು ಕಾರ್ಯಾಚರಣೆಗಳನ್ನು ನಡೆಸುವುದು ಕಠಿಣ ಸವಾಲಿನ ಸಂಗತಿ.
ಈ ಪ್ರದೇಶವು ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಣ್ಗಾವಲಿನಲ್ಲಿದೆ. ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರು ಆಗಾಗ್ಗೆ ಭಾರತಕ್ಕೆ ನುಸುಳಲು ಪ್ರಯತ್ನಿಸುವ ಪ್ರದೇಶ ಇದು. ಆದಾಗ್ಯೂ ಜಾಗರೂಕ ಬಿಎಸ್ಎಫ್ ಪ್ರತಿ ಬಾರಿಯೂ ಅವರ ದುಷ್ಕೃತ್ಯಗಳನ್ನು ವಿಫಲಗೊಳಿಸಿದೆ. ಸವಾಲಿನ ನಡುವೆಯೂ ಗಡಿಯನ್ನು ಸುರಕ್ಷಿತವಾಗಿ ಕಾಯುತ್ತಿರುವ, ದೇಶವನ್ನು ದುಷ್ಕರ್ಮಿಗಳು ನುಸುಳದಂತೆ ಕಾಯುವ ಬಿಎಸ್‌ಎಫ್ ಯೋಧರ ಕಾರ್ಯವನ್ನು ಮೋದಿ ಶ್ಲಾಘಿಸಿದರು.
ಪ್ರಧಾನಿ ಮೋದಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಅವರ ಕೆಲಸವನ್ನು ಸುಲಭಗೊಳಿಸಲು ಯಾವುದಾದರೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೇ ಪ್ರಶ್ನಿಸಿದರು. ಭುಜ್‌ಗೆ ತೆರಳುವ ಮೊದಲು ಮೋದಿ ಕೊಲ್ಲಿ ಪ್ರದೇಶವನ್ನು ಖುದ್ದಾಗಿ ಪರಿಶೀಲಿಸಿದರು. ಸುಮಾರು ಒಂದು ಗಂಟೆ ಅಲ್ಲಿಯೇ ಕಾಲ ಕಳೆದರು.