ಮೈಸೂರು: ಬೆಳಗಾವಿಯಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಕೆಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ..
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸಿಎಂ ಮನಸ್ಸು ಮಾಡಿದರೆ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಬುದು ಇದು ಅತ್ಯಂತ ಚಿಕ್ಕ ವಿಷಯ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ..
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ. ಈ ಸಮಸ್ಯೆ ವಿವಾದದಲ್ಲಿ ಜನ ಪ್ರತಿನಿಧಿಗಳ ಕರೆದು ಮಾತನಾಡಿಸುವುದು ಏನಿದೆ. ಮುಖ್ಯಮಂತ್ರಿಗಳೇ ವೈಯಕ್ತಿಕವಾಗಿ ಈ ನಿರ್ಧಾರ ತೆಗೆದುಕೊಳ್ಳಬಹುದು. ಸಿಎಂ ಸಿದ್ದರಾಮಯ್ಯ ಆ ಕೆಲಸ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳ ಲಾಬಿ, ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ. ಮೊದಲು ಕಬ್ಬು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಎಚ್‌ಡಿಕೆ ಆಗ್ರಹಿಸಿದರು.
ಇನ್ನು ಜೆಡಿಎಸ್ ಪಕ್ಷದ ಯಾವ ನಾಯಕರ ಕಬ್ಬು ಕಾರ್ಖಾನೆಯೂ ಇಲ್ಲ. ಬಂಡೆಪ್ಪ ಕಾಶೆಂಪೂರ ಅವರ ಕಾರ್ಖಾನೆ ಹಿಂದೆ ಇತ್ತು. ಅದನ್ನ ಅವರ ಮಾರಾಟ ಮಾಡಿದ್ದಾರೆ. ನಮ್ಮ ನಾಯಕರಲ್ಲಿ ಒಬ್ಬರದ್ದು ಕಾರ್ಖಾನೆಯೂ ಇಲ್ಲ. ಇದನ್ನ ಜನರಿಗೆ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರದಲ್ಲಿ ಹಣದ ಕೊರತೆ ಇದೆ ವಿಚಾರಕ್ಕೆ ಉತ್ತರಿಸಿದ ಕೇಂದ್ರ ಸಚಿವ ಎಚ್‌ಡಿಕೆ ರಾಜ್ಯ ಸರಕಾರದ ಖಜಾನೆಯಲ್ಲಿ ಹಣದ ಕೊರತೆ ಇದ್ರೆ ನನ್ನ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಸಿಎಂ ಸಿದ್ದರಾಮಯ್ಯ ಹೇಳಬೇಕು. ಅದನ್ನು ಬಿಟ್ಟು ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡೋದು ಸರಿಯಲ್ಲ. ರಾಜ್ಯ ಸರಕಾರದ ಖಜಾನೆ ಖಾಲಿಯಾಗಿಲ್ಲ. ರಾಜ್ಯದ ಜನರು ಪ್ರಾಮಾಣಿಕವಾಗಿ ಖಜಾನೆ ತುಂಬಿಸುತ್ತಾರೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ..
2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಎಂದು ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ದ ಕೇಂದ್ರ ಸಚಿವ 20, 10 ವರ್ಷ ನಾವೇ ಸರಕಾರ ನಡೆಸುತ್ತೇವೆ ಎಂದು ಹೇಳಿದವರು ಏನಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. 2028ಕ್ಕೆ ಏನೇನಾಗುತ್ತೊ ಯಾರಿಗೆ ಗೊತ್ತು ಬಿಡಿ ಎಚ್.ಡಿ ಕುಮಾರಸ್ವಾಮಿ ಉತ್ತರಿಸಿದರು.


