ಬೆಂಗಳೂರು : ನಾನು ಕೊಟ್ಟ ಹೇಳಿಕೆಗೆ ಪೊಲೀಸರು ನನ್ನ ವಿಚಾರಣೆ ಮಾಡಲು ಬಂದಿದ್ದರು.ಅಪರಾಧ ಅನ್ನೋದಾದ್ರೆ ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಅರೆಸ್ಟ್ ಮಾಡಿ, ವಿಚಾರಣೆ ಮಾಡಿ ಎಂದಿದ್ದೇನೆ. VVIP ಟ್ರೀಟ್ಮೆಂಟ್ ನನಗೆ ಬೇಕಾಗಿಲ್ಲ, ರತ್ನಗಂಬಳಿ ಬೇಕಾಗಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಇನ್ನು ಗೋಧ್ರಾ ಮಾದರಿ ಹತ್ಯಾಕಾಂಡ ನಡೆಯಬಾರದು ಎಂಬ ಹೇಳಿಕೆ ಸಂಬಂಧ ಇಂದು ಪೊಲೀಸರು ಹೇಳಿಕೆ ಪಡೆಯಲು ಬಿ.ಕೆ ಹರಿಪ್ರಸಾದ್ ಇರುವ ಕುಮಾರಕೃಪಾ ಗೆಸ್ಟ್ ಹೌಸ್‍ಗೆ ತೆರಳಿದ್ದರು. ಪೊಲೀಸರು ಬಂದು ಹೋದ ಬಳಿಕ ಮಾತನಾಡಿದ ಬಿ.ಕೆ ಹರಿಪ್ರಸಾದ್, ಅನಂತ್ ಕುಮಾರ್ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ರತ್ನಗಂಬಳಿ ಹಾಕಿದ್ದಾರೆ. ಇನ್ನು ಪೊಲೀಸ್ ಠಾಣೆಗೆ ಠಾಣೆಗೆ ಬರಲು ವಾರೆಂಟ್ ತಗೊಂಡು ಬನ್ನಿ ಎಂದಿದ್ದೇನೆ. ಈಗ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ. ನಾನು ದೇಶದಲ್ಲಿ ಓಡಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಪರಿಸ್ಥಿತಿಯೇ ಈ ರೀತಿಯಾದ್ರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ನಾನು ಮಂಪರು ಪರೀಕ್ಷೆಗೂ ರೆಡಿ. ನಾನು ಅಯೋಧ್ಯೆಗೆ ಹೋಗುವವರಿಗೆ ರಕ್ಷಣೆ ವಿಚಾರವಾಗಿ ಮಾತನಾಡಿರೋದು. ಹೀಗಾಗಿ ನಾನು ಅಪರಾಧಿ ಅಲ್ಲ ಎಂದು ಹರಿಪ್ರಸಾದ್ ಅವರು ಪುನರುಚ್ಛರಿಸಿದರು.ಕಲ್ಲಡ್ಕ ಪ್ರಭಾಕರ್ ಮೇಲೆ ಯಾವುದೇ ಕೇಸ್ ಹಾಕಿಲ್ಲ, ಅನಂತ್ ಕುಮಾರ್ ಹೆಗಡೆ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನ್ನ ಹೇಳಿಕೆ ಪ್ರಚೋದನೆ ಆದ್ರೆ ಕ್ರಮ ತೆಗೆದುಕೊಳ್ಳಲಿ. ನನ್ನ ಪರಿಸ್ಥಿತಿ ಈ ರೀತಿ ಆದ್ರೆ, ಕಾರ್ಯಕರ್ತರ ಪರಿಸ್ಥಿತಿ ಏನು ಎಂಬ ಬಗ್ಗೆ ಯೋಚನೆ ಮಾಡ್ತಿದ್ದೇನೆ ಎಂದರು.


