ಹಾಸನ: “ರಾಜಕೀಯದಲ್ಲಿ ಅಧಿಕಾರ ಪಡೆಯುವ ಆಸೆ ಎಲ್ಲರಿಗೂ ಇರುತ್ತದೆ. ಜೆಡಿಎಸ್ ನಾಯಕರು ಅಧಿಕಾರ ಹುಡುಕಿಕೊಂಡು ಹೋದರೆ ಸರಿ, ನಾನು ಹೋದರೆ ದ್ರೋಹವೇ?” ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರಸೀಕೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡಿದ್ದಲ್ಲದೆ, ಎಚ್.ಡಿ. ರೇವಣ್ಣ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದ್ದಾರೆ.
“ನಾನು ಸಾಯುವವರೆಗೂ ಕೇವಲ ಎಂಎಲ್‍ಎ ಆಗಿಯೇ ಇರಬೇಕಾ? ನಿಮಗಿರುವಂತೆ ನನಗೂ ಮಂತ್ರಿಯಾಗುವ ಆಸೆ ಇದೆ. ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಮಂತ್ರಿ ಸ್ಥಾನ ಮುಖ್ಯ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನನಗೆ ಸಹಕಾರ ನೀಡುತ್ತಿದ್ದಾರೆ, ಅದಕ್ಕಾಗಿಯೇ ಕಾಂಗ್ರೆಸ್ ಸೇರಿದ್ದೇನೆ” ಎಂದು ನೇರವಾಗಿಯೇ ಹೇಳಿದರು.
ಕುಟುಂಬ ರಾಜಕಾರಣಕ್ಕೆ ಟಾಂಗ್:
“ಪಕ್ಷದಲ್ಲಿ ಎಲ್ಲ ಸ್ಥಾನಗಳನ್ನು ನಿಮ್ಮ ಮನೆಯವರಿಗೇ ಹಂಚಿಕೊಳ್ಳುತ್ತಿದ್ದೀರಿ. ಅದಕ್ಕಾಗಿಯೇ ನಾನು ಪಕ್ಷ ಬಿಟ್ಟೆ. ಇನ್ನೂ ಎಷ್ಟು ಕಾಲ ನಿಮ್ಮ ಬಾಲ ಹಿಡಿದುಕೊಂಡು ಕೂರಲು ಸಾಧ್ಯ?” ಎಂದು ಜೆಡಿಎಸ್ ನಾಯಕರನ್ನು ಪ್ರಶ್ನಿಸಿದರು.
“ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿ ನೀವು ಅಧಿಕಾರ ಕೊಟ್ಟಿದ್ದೀರಾ? ಅದು ಮೋಸ ಅಲ್ವಾ?” ಎಂದು ಹಿಂದಿನ ಮೈತ್ರಿ ವಿಚಾರವನ್ನು ಕೆದಕಿದರು. “ನೀವು ಬಿಜೆಪಿ ಜೊತೆ ಹೇಗೆ ಕೈಜೋಡಿಸಿದಿರಿ. ಅರಸೀಕೆರೆಯಲ್ಲಿ ನಾನು ಪಕ್ಷ ಸಂಘಟನೆ ಮಾಡಿದ್ದೆ. ನನ್ನ ವಿರುದ್ಧ ವೀಲ್ ಚೇರ್‌ನಲ್ಲಿ ಬಂದು ಪ್ರಚಾರ ಮಾಡಿದ್ದೀರಿ. ಮುಂದೆ ಇದೇ ರೀತಿ ಚುನಾವಣೆ ನಡೆದರೆ ಜೆಡಿಎಸ್‌ಗೆ 50 ಸಾವಿರ ಮತಗಳೂ ಬರುವುದಿಲ್ಲ” ಎಂದು ಭವಿಷ್ಯ ನುಡಿದರು.
“ಪಾಪ ಆ ಅಜ್ಜ ಬರಲಿ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ನಾನು ಏನೂ ಮಾತನಾಡಲ್ಲ. ಆದರೆ ಅವರ ಮಕ್ಕಳು ನನ್ನನ್ನು ಬೈಯ್ಯಲು ಸಮಾವೇಶ ಮಾಡಿದ್ದನ್ನು ಜನರು ಗಮನಿಸಿದ್ದಾರೆ” ಎಂದರು.


