ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆರ್ಥಿಕ ನೀತಿ ಹಾಗೂ ಜಿಎಸ್‌ಟಿ ವಿಚಾರದಲ್ಲಿ ಸೀತಾರಾಮನ್ ಅವರು ಟ್ರೋಲ್‌ಗೆ ಒಳಗಾಗುವುದು ಇದೆ. ಇದೀಗ ಪಾಪ್ ಕಾರ್ನ್ ಮೇಲೆ ಮೂರು ಮಾದರಿಯ ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದೆ. ಪಾಪ್ ಕಾರ್ನ್‌ನೂ ಬಿಡಲ್ವಾ. ಹಾಗಾದರೆ ಮುಂದೆ ಪಾನೀಪುರಿಗೂ ಜಿಎಸ್‌ಟಿ ಬರುವ ದಿನ ದೂರವಿಲ್ಲ ಅಂತ ಜನ ಟ್ರೋಲ್ ಮಾಡ್ತಿದ್ದಾರೆ. ಈಚೆಗೆ ನಡೆದ ಜಿಎಸ್‌ಟಿ ಸಭೆಯಲ್ಲಿ ಪಾಪ್‌ಕಾರ್ನ್‌ಗೆ ಮೂರು ಮಾದರಿಯ ಜಿಎಸ್‌ಟಿ ವಿಧಿಸುವುದಕ್ಕೆ ಶಿಫಾರಸು ಮಾಡಲಾಗಿದೆ. ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಚಿತ್ರಮಂದಿರಗಳಲ್ಲಿ ಈಗಾಗಲೇ ಪಾಪ್ ಕಾರ್ನ್ ಬೆಲೆ ದುಬಾರಿ ಇದೆ.
ನಾನು ಪಾಪ್ ಕಾರ್ನ್ ತಿನ್ನಲ್ಲ! ನಿರ್ಮಲಾ ಅವರ ಹಳೆಯ ಡೈಲಾಗ್‌ವೊಂದನ್ನು ಈ ವಿಷಯಕ್ಕೆ ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ. ಪಾಪ್ ಕಾರ್ನ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಸಾಕಷ್ಟು ಟ್ರೋಲ್‌ಗಳಾಗಿದ್ದರೂ, ಈ ಟ್ರೋಲ್ ಜನರ ಗಮನ ಸೆಳೆದಿದೆ. ಹೌದು ಈ ಹಿಂದೆ ದೇಶದಲ್ಲಿ ಈರುಳ್ಳಿ ಬೆಲೆ 150 ರೂಪಾಯಿ ಸಮೀಪಕ್ಕೆ ಬಂದಾಗ ಸಂಸತ್‌ನಲ್ಲಿ ಈ ವಿಚಾರವಾಗಿ ಉತ್ತರ ನೀಡುವಾಗ ನಿರ್ಮಲಾ ಅವರು ನಾನು ಜಾಸ್ತಿ ಈರುಳ್ಳಿ ತಿನ್ನಲ್ಲ. ಈರುಳ್ಳಿ ತಿನ್ನುವ ಮನೆತನದಿಂದ ಬಂದಿಲ್ಲ ಎಂದಿದ್ದರು. ಇದೀಗ ನಿರ್ಮಲಾ ಅವರು ನಾನು ಪಾಪ್‌ಕಾರ್ನ್ ತಿನ್ನಲ್ಲ ಅಂತ ಹೇಳುತ್ತಿರುವಂತೆ ಫೋಟೋ ಬಳಸಿ ಟ್ರೋಲ್ ಮಾಡಲಾಗಿದೆ. ಮುಂದಿನ ಟಾರ್ಗೆಟ್ ನಾನೇನಾ ? ಇನ್ನೊಂದು ಟ್ರೋಲ್‌ನಲ್ಲಿ ಪಾನಿಪುರಿಯ ಚಿತ್ರವನ್ನು ಬಳಸಿ, ಪಾಪ್‌ಕಾರ್ನ್‌ಗೂ ಜಿಎಸ್‌ಟಿ ಬಂದಾಯ್ತು. ಮುಂದಿನ ಟಾರ್ಗೆಟ್ ನಾನೇ ಇರಬೇಕು ಎಂದು ಪಾನಿಪುರಿ ಹೇಳುತ್ತಿರುವಂತೆ ಟ್ರೋಲ್ ಮಾಡಲಾಗಿದೆ. ಪಾನಿಪುರಿ ತಿನ್ನುವವರ ಸಂಖ್ಯೆ ಜಾಸ್ತಿ ಇದೆ. ಇದರ ಮೇಲೂ ಜಿಎಸ್‌ಟಿ ಬಿದ್ದರೆ ಅಚ್ಚರಿಪಡಬೇಕಿಲ್ಲ ಎಂದೂ ಟ್ರೋಲ್ ಮಾಡಲಾಗುತ್ತಿದೆ.