ಬಾಗಲಕೋಟೆ: ಅಬಕಾರಿ ಇಲಾಖೆಯಲ್ಲಿ ಸಿಎಲ್-7 ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ, ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ನಾನು ಯಾವುದೇ ತಪ್ಪು ಮಾಡಿಲ್ಲ, ಇದು ನನ್ನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ತೇಜೋವಧೆ” ಎಂದು ಅವರು ಕಿಡಿಕಾರಿದ್ದಾರೆ.
ತಮ್ಮ ಪುತ್ರನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, “ಈ ವ್ಯವಹಾರದಲ್ಲಿ ನನ್ನ ಮಗನ ಹೆಸರನ್ನು ಯಾಕೆ ಎಳೆದು ತರುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಆಡಿಯೋದಲ್ಲಿ ಯಾರ್ಯಾರ ಹೆಸರೋ ಕೇಳಿಬರುತ್ತಿದೆ. ಅನಗತ್ಯವಾಗಿ ನನ್ನ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ. ಇದೆಲ್ಲವನ್ನೂ ನೋಡಿ ನನಗೆ ಸಾಕಾಗಿದೆ, ಈಗ ಕಾನೂನು ಹೋರಾಟ ನಡೆಸುವುದೇ ಅಂತಿಮ ದಾರಿ, ಎಂದು ತಿಳಿಸಿದರು.
ಈ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ ಅವರು, “ನನ್ನ ವಿರುದ್ಧ ದೊಡ್ಡ ಮಟ್ಟದ ಕುತಂತ್ರ ನಡೆಯುತ್ತಿದೆ. ನನ್ನ ಮಾನಹಾನಿ ಮಾಡಲು ಹೊರಟಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡುತ್ತೇನೆ. ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಇಷ್ಟೆಲ್ಲಾ ವಿವಾದಗಳಾದರೂ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ನಿಮ್ಮನ್ನು ಪ್ರಶ್ನಿಸಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತಿಮ್ಮಾಪುರ, “ಇಲ್ಲಿಯವರೆಗೆ ಮುಖ್ಯಮಂತ್ರಿಗಳು ನನಗೆ ಯಾವುದನ್ನೂ ಕೇಳಿಲ್ಲ. ಏಕೆಂದರೆ ತಿಮ್ಮಾಪುರ ಯಾವುದೇ ತಪ್ಪು ಮಾಡಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ತಪ್ಪು ಮಾಡದಿದ್ದ ಮೇಲೆ ಅವರು ಕೇಳುವ ಅಗತ್ಯವೇನಿದೆ?” ಎಂದು ಆತ್ಮವಿಶ್ವಾಸದಿಂದ ನುಡಿದರು.


