Tuesday, April 29, 2025
30.4 C
Bengaluru
LIVE
ಮನೆ#Exclusive News"ಅಂಬೇಡ್ಕರ್ ವಿರೋಧಿ ನಾನಲ್ಲ" : ಅಮಿತ್​ ಶಾ...!

“ಅಂಬೇಡ್ಕರ್ ವಿರೋಧಿ ನಾನಲ್ಲ” : ಅಮಿತ್​ ಶಾ…!

ನವದೆಹಲಿ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ, ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಹಾಗೂ ಎಲ್ಲಾ ವಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಡಿ. 18ರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾ, “ಅಂಬೇಡ್ಕರ್ ವಿರೋಧಿ ನಾನಲ್ಲ… ನನ್ನನ್ನು ಅಂಬೇಡ್ಕರ್ ವಿರೋಧಿ ಎಂದು ಬಿಂಬಿಸುತ್ತಿರುವವರೇ ನಿಜವಾಗಿಯೂ ಅಂಬೇಡ್ಕರ್ ವಿರೋಧಿಗಳು. ಅವರೇ ಇಂದು ನನ್ನ ಮಾತುಗಳನ್ನು ತಿರುಚಿ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಭಾಷಣವನ್ನು ಪೂರ್ತಿ ಕೇಳಿದವರಿಗೆ ಅದು ಅರ್ಥವಾಗುತ್ತೆ” ಎಂದು ಅವರು ತಿರುಗೇಟು ನೀಡಿದರು.

ರಾಜ್ಯಸಭೆಯಲ್ಲಿ ಡಿ. 17ರಂದು ಭಾಷಣ ಮಾಡಿದ್ದ ಶಾ, ಅಂಬೇಡ್ಕರ್… ಅಂಬೇಡ್ಕರ್.. ಎಂಬುದೇ ಪ್ರತಿಪಕ್ಷಗಳ ಜಪ ಆಗಿದೆ. ಅವರ (ಅಂಬೇಡ್ಕರ್) ಜಪ ಮಾಡುವುದೇ ಒಂದು ಫ್ಯಾಶನ್ ಆಗಿಬಿಟ್ಟಿದೆ. ಅಂಬೇಡ್ಕರ್ ಸ್ಮರಣೆ ಮಾಡುವ ಬದಲು ದೇವರ ಹೆಸರನ್ನಾದರೂ ಸ್ಮರಿಸಿದ್ದರೆ ಏಳು ಜನ್ಮಗಳಿಗಾಗುವಷ್ಟು ಪುಣ್ಯವಾದರೂ ಬರುತ್ತಿತ್ತು ಎಂದು ಹೇಳಿದ್ದರು. ಇದು ಪ್ರತಿಪಕ್ಷಗಳನ್ನು ಕೆರಳಿಸಿತ್ತು. ಅಲ್ಲದೆ, ಈ ವಿಚಾರ ಇಡೀ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿ, ರಾಜ್ಯಮಟ್ಟಗಳಲ್ಲಿ, ಜಿಲ್ಲಾ ಮಟ್ಟಗಳಲ್ಲಿನ ರಾಜಕೀಯ ನಾಯಕರು, ದಲಿತ ಪರ ಸಂಘ- ಸಂಸ್ಥೆಗಳು, ಒಕ್ಕೂಟಗಳು ಶಾ ವಿರುದ್ಧ ಕಿಡಿಕಾರಿದ್ದವು.

ಕರ್ನಾಟಕದ ಸಿಎಂ ಸಿದ್ದರಾಮಯ್ಯ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಶಾ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಈ ವಿವಾದ, ನೋಡ ನೋಡುತ್ತಲೇ ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೆ ವ್ಯಾಪಿಸಿತ್ತು. ಇದರಿಂದಾಗಿ ಅಮಿತ್ ಶಾ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ, ತಮ್ಮನ್ನು ಟೀಕಿಸುತ್ತಿರುವ ವಿಪಕ್ಷಗಳ ವಿರುದ್ಧ ಅಕ್ಷರಶಃ ಮುಗಿಬಿದ್ದ ಅವರು, ನಿಜ ಹೇಳಬೇಕೆಂದರೆ, ಸಂವಿಧಾನವನ್ನು, ಸಂವಿಧಾನ ಶಿಲ್ಪಿಯನ್ನು ಘಾಸಿಗೊಳಿಸಿದ್ದು ಅವರೇ (ಕಾಂಗ್ರೆಸ್). ಈಗ ನನ್ನ ಮೇಲೆ ಮುಗಿಬಿದ್ದಿದ್ದಾರೆ ಎಂದು ಹೇಳಿದರು.

“ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಚರ್ಚಾಕೂಟದಲ್ಲಿ ಕಾಂಗ್ರೆಸ್ ಹೇಗೆ ಅಂಬೇಡ್ಕರ್ ಅವರನ್ನು ಅಗೌರವವಾಗಿ ನಡೆಸಿಕೊಂಡಿತು ಎಂಬುದನ್ನು ಎಲ್ಲರೂ ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ’’ಎಂದು ಅಮಿತ್ ಶಾ ತಿರುಗೇಟು ನೀಡಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments