ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಶೋಧಕ್ಕಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ನಿಧಿಯನ್ನು ಸರ್ಪಗಳು ಕಾಯುತ್ತವೆ ಎಂಬ ಜನಪದ ನಂಬಿಕೆಗೆ ಪುಷ್ಟಿ ನೀಡುವಂತೆ ನಡೆದ ಈ ಘಟನೆಯಿಂದ ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಮೂರನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿತ್ತು. ಈ ವೇಳೆ ಅಗೆಯುವ ಕಾರ್ಯದಲ್ಲಿ ತೊಡಗಿದ್ದ ಜೆಸಿಬಿ ಯಂತ್ರದ ಬಳಿಯೇ ಬೃಹತ್ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ಕಂಡು ಜೆಸಿಬಿ ಚಾಲಕ ಹಾಗೂ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ಲಕ್ಕುಂಡಿ ಗ್ರಾಮದಲ್ಲಿ ಮಳೆಗಾಲದಲ್ಲಿ ಮಣ್ಣು ಅಗೆದಾಗ ಈ ಹಿಂದೆ ಚಿನ್ನದ ತುಣುಕುಗಳು ಸಿಕ್ಕ ಉದಾಹರಣೆಗಳಿವೆ. ಈ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆ” ಎಂಬ ಕಥೆಗಳು ಇಲ್ಲಿ ಚಾಲ್ತಿಯಲ್ಲಿದ್ದವು. ಈಗ ಅಧಿಕೃತ ಉತ್ಖನನ ನಡೆಯುವಾಗ ಹಾವು ಪ್ರತ್ಯಕ್ಷವಾಗಿರುವುದು ಗ್ರಾಮಕ್ಕೆ ಯಾವುದಾದರೂ ಕಂಟಕ ತರಬಹುದೇ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಉತ್ಖನನ ಸ್ಥಳದಲ್ಲಿ ಹಾವನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿ, ಕಾರ್ಯವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಆದರೂ ಲಕ್ಕುಂಡಿಯಲ್ಲಿ ಮಾತ್ರ ‘ನಿಧಿ ಮತ್ತು ಸರ್ಪ’ದ ಕುರಿತ ಚರ್ಚೆಗಳು ಬಿರುಸಾಗಿ ನಡೆಯುತ್ತಿವೆ.


