ಬೆಂಗಳೂರು: ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ. “ರಾಜೀವ್ ಗೌಡ ಬಂಧನಕ್ಕೆ ಮೊದಲ ದಿನವೇ ಆದೇಶ ನೀಡಿದ್ದೇನೆ. ಅವರು ಎಲ್ಲಿಯವರೆಗೆ ಅಂತ ತಪ್ಪಿಸಿಕೊಳ್ಳಲು ಸಾಧ್ಯ? ಖಂಡಿತವಾಗಿಯೂ ಅವರನ್ನು ಹಿಡಿದು ತರುತ್ತೇವೆ,” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಶಿಡ್ಲಘಟ್ಟ ಪೌರಾಯುಕ್ತ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ರಾಜೀವ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ರಾಜೀವ್ ಗೌಡ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಾರೇ ಆಗಿರಲಿ, ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು, ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ನಮ್ಮ ಪೊಲೀಸರಿಗೆ ಪತ್ರ ಬರೆದು ತನಿಖೆಗೆ ಸಹಕಾರ ಕೋರಿದ್ದಾರೆ. ಪ್ರಕರಣ ಈಗಷ್ಟೇ ಪ್ರಾಥಮಿಕ ಹಂತದಲ್ಲಿದ್ದು, ಬೆಳಗಾವಿ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆಯಲು ಸೂಚಿಸಲಾಗಿದೆ. ಮಹಾರಾಷ್ಟ್ರ ಪೊಲೀಸರ ತನಿಖೆಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ನೆರವು ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಗಣರಾಜ್ಯೋತ್ಸವ ಭಾಷಣದ ಬಗ್ಗೆ ಕುತೂಹಲ
ಗಣರಾಜ್ಯೋತ್ಸವದಂದು ರಾಜ್ಯಪಾಲರ ಭಾಷಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇಂದು ಸಂಜೆಯೊಳಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ರಾಜ್ಯಪಾಲರು ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು,” ಎಂದು ಮಾರ್ಮಿಕವಾಗಿ ನುಡಿದರು.


