ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗೃಹಿಣಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಆಲ್ದೂರು ಹೋಬಳಿಯಲ್ಲಿ ಇಂದು ನಡೆಯಬೇಕಿದ್ದ ‘ಹಿಂದೂ ಸಮಾಜೋತ್ಸವ’ವನ್ನು ಮುಂದೂಡಲಾಗಿದೆ.
ಮೃತರನ್ನು ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ನವಮಿ (30) ಎಂದು ಗುರುತಿಸಲಾಗಿದೆ. ಅಪಘಾತವೆಸಗಿದ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆಲ್ದೂರು ಗ್ರಾಮದ ಬಳಿ ನವಮಿ ಅವರು ಸಂಚರಿಸುತ್ತಿದ್ದ ವೇಳೆ ಟೆಂಪೋ ಟ್ರಾವೆಲರ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನವಮಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ತಕ್ಷಣ ಮಾನವೀಯತೆ ಮರೆತ ಚಾಲಕ, ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪಘಾತಕ್ಕೆ ಕಾರಣವಾದ ಟೆಂಪೋ ಟ್ರಾವೆಲರ್ ತುಮಕೂರು ಜಿಲ್ಲೆಯ ತಿಪಟೂರು ವ್ಯಾಪ್ತಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ನೀಡಿದ ವಾಹನದ ಸಂಖ್ಯೆಯ ಆಧಾರದ ಮೇಲೆ ಆಲ್ದೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿ ಚಾಲಕನಿಗಾಗಿ ಬಲೆ ಬೀಸಿದ್ದಾರೆ.
ಸಹಕಾರ ಸಂಘದ ಸಕ್ರಿಯ ಉದ್ಯೋಗಿಯಾಗಿದ್ದ ನವಮಿ ಅವರ ಅಕಾಲಿಕ ನಿಧನಕ್ಕೆ ಆಲ್ದೂರು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಗ್ರಾಮದ ಮಗಳ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ, ಇಂದು ಅದ್ಧೂರಿಯಾಗಿ ಆಯೋಜಿಸಲಾಗಿದ್ದ ‘ಹಿಂದೂ ಸಮಾಜೋತ್ಸವ’ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಮುಂದಿನ ದಿನಗಳಿಗೆ ಮುಂದೂಡಲು ಆಯೋಜಕರು ನಿರ್ಧರಿಸಿದ್ದಾರೆ.


