
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಗೃಹಿಣಿ ಘಾಟಿ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಡೆದಿದೆ.. ಗಂಡ, ಅತ್ತೆ, ಮಾವ, ಮೈದುನ ಸೇರಿದಂತೆ ಸಂಬಂಧಿಕರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗೃಹಿಣಿ ಸಾಯುವ ಮುನ್ನ ವಿಡಿಯೋ ಮಾಡಿ ಸಾವನ್ನಪ್ಪಿದ್ದಾರೆ.. ತಪಸೀಹಳ್ಳಿ ಗ್ರಾಮದ ನಿವಾಸಿ ಪುಷ್ಪಾವತಿ (30) ಮೃತ ದುರ್ದೈವಿ. ಕಳೆದ 11 ತಿಂಗಳ ಹಿಂದಷ್ಟೇ ವೇಣು ಎಂಬುವವರನ್ನು ವಿವಾಹವಾಗಿದ್ದ ಪುಷ್ಪಾವತಿ, ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪುಷ್ಪಾವತಿ ಮತ್ತು ವೇಣು ಅವರ ವೈವಾಹಿಕ ಜೀವನದಲ್ಲಿ ಆರಂಭದಿಂದಲೂ ಸಮಸ್ಯೆಗಳು ಕಾಡಿದ್ದವು. ಮದುವೆಯಾಗಿ ಬಂದ ಕೆಲವೇ ದಿನಗಳಲ್ಲಿ ಪತಿ ವೇಣು, ಅತ್ತೆ, ಮಾವ ಮತ್ತು ಮೈದುನರ ಕಿರುಕುಳ ಆರಂಭವಾಯಿತು. ವರದಕ್ಷಿಣೆಯ ಹೆಸರಿನಲ್ಲಿ ಹಣಕ್ಕಾಗಿ ನಿರಂತರ ಹಿಂಸೆ ನೀಡಲಾಗುತ್ತಿತ್ತು. ಪುಷ್ಪಾವತಿ ಅವರ ಕುಟುಂಬದಿಂದ ಹೆಚ್ಚಿನ ಹಣ ತರಬೇಕೆಂದು ಒತ್ತಾಯಿಸುತ್ತಿದ್ದರು.
ಇದರ ಜೊತೆಗೆ ಮಕ್ಕಳ ಬಗ್ಗೆಯೂ ವಿವಾದಗಳು ಉದ್ಭವಿಸಿದ್ದವು. ಪುಷ್ಪಾವತಿ ಮಕ್ಕಳು ಬೇಕು ಎಂದು ಪತಿಯ ಬಳಿ ಪ್ರಸ್ತಾಪಿಸಿದ್ದರು. ಆದರೆ, ವೇಣು ಸ್ವಲ್ಪ ದಿನ ತಾಳು ಎಂದು ಹೇಳಿ, ನಂತರ ಅನುಮಾನದಿಂದ ಡಾಕ್ಟರ್ ಸಲಹೆ ಪಡೆಯಲು ಸಹ ಒಪ್ಪದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿದ್ದರೆಂದು ಆರೋಪಿಸಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಪುಷ್ಪಾವತಿ ಈ ಕಿರುಕುಳವನ್ನು ಸಹಿಸಲಾರದೆ ಪೊಲೀಸರಿಗೆ ದೂರು ದಾಖಲಿಸಿದ್ದರು. ಪುಷ್ಪಾವತಿ ಅವರ ಕುಟುಂಬಸ್ಥರು ಸಹಾಯಕ್ಕಾಗಿ ಬಂದಾಗಲೂ ಅವರ ವಿರುದ್ಧ ಹಲ್ಲೆ ನಡೆಸಿದ್ದರೆಂದು ಹೇಳಲಾಗಿದೆ.




