ಮದುವೆ ಮಂಟಪದಲ್ಲೇ ಸುಲಿಗೆಕೋರ ‘ಹನಿಟ್ರಾಪ್’ ಕಿಲಾಡಿ ಅರೆಸ್ಟ್!

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಅತ್ಯಾಚಾರದ ನಾಟಕವಾಡಿಸಿ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ನ ಮಾಸ್ಟರ್ಮೈಂಡ್ ಆಕಾಶ್ ನೀಲಕಂಠ ಎಂಬಾತನನ್ನು ಪೊಲೀಸರು ಆತನ ಮದುವೆಯ ದಿನವೇ ಬಂಧಿಸಿದ್ದಾರೆ.
‘ಇಲ್ಲೀಗಲ್ ಗ್ಯಾಂಗ್’ ಎಂಬ ಹೆಸರಿನ ತಂಡ ಕಟ್ಟಿಕೊಂಡಿದ್ದ ಆಕಾಶ್, ಯುವತಿಯರನ್ನು ಬಳಸಿ ಶ್ರೀಮಂತರನ್ನು ಬಲೆಗೆ ಬೀಳಿಸುತ್ತಿದ್ದ. ಇತ್ತೀಚೆಗೆ ಕೊಹೆಫಿಜಾ ನಿವಾಸಿಯೊಬ್ಬರ ಮನೆಗೆ ರಾತ್ರಿ ವೇಳೆ ಯುವತಿಯನ್ನು ಕಳುಹಿಸಿ, ಆಕೆ ಕೂಗಾಟ ನಡೆಸುವಂತೆ ಮಾಡಿದ್ದ. ಕೂಡಲೇ ಸ್ಥಳಕ್ಕೆ ಬಂದ ಆಕಾಶ್ ಮತ್ತು ತಂಡ, ಆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಸುಳ್ಳು ಆರೋಪ ಹೊರಿಸಿ ಹಲ್ಲೆ ನಡೆಸಿದ್ದರು.
ಸಂತ್ರಸ್ತ ವ್ಯಕ್ತಿಯನ್ನು ಅಪಹರಿಸಿ 5 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿದ್ದ ಗ್ಯಾಂಗ್, ₹8 ಲಕ್ಷಕ್ಕೆ ಬೇಡಿಕೆಯಿಟ್ಟಿತ್ತು. ಪ್ರಾಣಭಯದಿಂದ ಆ ವ್ಯಕ್ತಿ ತನ್ನ ಸಹೋದರನ ಮೂಲಕ ₹50,000 ಹಣ ವರ್ಗಾಯಿಸಿ ಬಿಡುಗಡೆ ಹೊಂದಿದ್ದರು. ಬಳಿಕ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ತನ್ನ ಮದುವೆಯ ಖರ್ಚಿಗಾಗಿ ಆಕಾಶ್ ಈ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಬುಧವಾರ ಮದುವೆಯ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿ ಆಕಾಶ್ ಹಾಗೂ ಆತನ ಸಹಚರರಾದ ಆಕಾಶ್ ಉಪಾಧ್ಯಾಯ ಮತ್ತು ರಾಮ್ ಠಾಕೂರ್ನನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ನಲ್ಲಿ ಸುಮಾರು 15 ಯುವಕರು ಭಾಗಿಯಾಗಿದ್ದು, ಅನೇಕರನ್ನು ಇದೇ ರೀತಿ ಬಲೆಗೆ ಬೀಳಿಸಿರುವ ಶಂಕೆ ವ್ಯಕ್ತವಾಗಿದೆ.




