ಬೆಂಗಳೂರು: ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ವಹಿಸಿದರು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದು ನಿಜ. ನೀವೆಲ್ಲ ನೋಡಿದ್ದೀರಿ. ಪಕ್ಷ ವಹಿಸಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪಕ್ಷದ ವಿಚಾರದಲ್ಲಿ ಅವರು ನನಗೆ ಏನು ಹೇಳಬೇಕು, ಹೇಳಿದ್ದಾರೆ. ಅದನ್ನು ಬಿಟ್ಟು ಬೇರೆ ಏನು ಮಾತನಾಡಿಲ್ಲ. ನಾನು ಪಕ್ಷದಲ್ಲಿ ಹಿರಿಯ ಇರಬಹುದು. ಆ ಪ್ರಶ್ನೆ ಮೂಡಿಲ್ಲ. ಅದರ ಬಗ್ಗೆ ನಾನು ಉತ್ತರವನ್ನು ನೀಡುವುದಿಲ್ಲ‌ ಎಂದರು.

ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ರಾಜ್ಯಪಾಲರ ನಿರ್ಣಯವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ‌. ಸಿಎಂ ಅವರ ಸಹಿ, ಯಾವುದೇ ರೀತಿಯ ದಾಖಲೆಗಳಿಲ್ಲ. ರಿಜಿಸ್ಟ್ರೇಷನ್ ಅಲ್ಲಿಯೂ ಸಹ ಅವರ ಹೆಸರು ಉಲ್ಲೇಖವಾಗಿಲ್ಲ. ಇದೆಲ್ಲವನ್ನು ನ್ಯಾಯಾಲಯ ಗಮನಿಸಿಯೇ ತೀರ್ಮಾನ ಕೊಡುತ್ತದೆ ಎಂದು ನಿರೀಕ್ಷೆ ಮಾಡಿದ್ದೇವೆ ಎಂದು ಹೇಳಿದರು.

ನ್ಯಾಯಾಲಯ ಏನೇ ತೀರ್ಪು ಕೊಟ್ಟರು, ಮುಖ್ಯಮಂತ್ರಿಯವರ ಜೊತೆ ಹೈಕಮಾಂಡ್ ನಿಲ್ಲಲಿದೆ. ನಾವೆಲ್ಲರು ಸಹ ಸಿಎಂ ಜೊತೆ ಇರುತ್ತೇವೆ. 29ರ ನಂತರದ ಬೆಳವಣಿಗೆ ಬಗ್ಗೆ ನೋಡೋಣ. ಕೋರ್ಟ್ ತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಚರ್ಚೆ ಆಗಲಿದೆ ಎಂದರು.

ಪ್ರಭಾವ ಬಳಸಿಲ್ಲ
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ನೀಡಿದ ವಿಚಾರದ ಪ್ರತಿಕ್ರಿಯಿಸಿ, ಕೆಐಎಡಿಬಿ ನಿವೇಶನ ಅಕ್ರಮವಾಗಿ ಪಡೆದಿದ್ದಾರ ಇಲ್ಲವೇ ಎಂಬುದನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿ. ಅವರು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಎಂಬುದಾದರೆ ರಾಜ್ಯಪಾಲರು ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳಲಿ.‌ ಖರ್ಗೆ ಅವರು ತಮ್ಮ ಪ್ರಭಾವ ಬಳಸಿ, ಟ್ರಸ್ಟ್‌ಗೆ ನಿವೇಶನ ಪಡೆದಿಲ್ಲ ಎಂದರು‌.

ಅರ್ಜಿ ಸಲ್ಲಿಸಿ ಇಂಥ ಪ್ರಾಜೆಕ್ಟ್ ಮಾಡುತ್ತಿದ್ದೇವೆ ಅಂತ ಹೇಳಿದಾಗ ಜಾಗ ಕೊಟ್ಟಿದ್ದಾರೆ.‌ ನೀವು ಕೂಡ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಿದರೆ ನಿಮಗೂ ಕೊಡುತ್ತಾರೆ. ಅಲ್ಲಿ ಕಡಿಮೆ ಬೆಲೆಗೆ ಕೊಡೋಕೆ ಸಾಧ್ಯ ಇಲ್ಲ. ಅಲ್ಲಿನ ಮಾರುಕಟ್ಟೆ ದರ ಏನಿರುತ್ತದೆಯೋ ಅದರ ಪ್ರಕಾರ ನೀಡಿರುತ್ತಾರೆ. ಖರ್ಗೆ ಕುಟುಂಬದವರ ಏನಾದರೂ ಪ್ರಭಾವ ಇದ್ದರೆ ಅದನ್ನ ರಾಜ್ಯಪಾಲರು ಪರಿಶೀಲನೆ ಮಾಡಲಿ. ಕಾನೂನು ಬಾಹಿರವಾಗಿ ಕೊಟ್ಟಿದ್ದಾರಾ ಅನ್ನೋದನ್ನ ರಾಜ್ಯಪಾಲರು ಪರಿಶೀಲನೆ ಮಾಡಿ ನಿರ್ಧಾರ ಮಾಡಲಿ ಎಂದು ಹೇಳಿದರು.

ಬಿಜೆಪಿ ಆಡಳಿತ‌ ನಡೆಸುತ್ತಿರುವ ಸರ್ಕಾರಗಳು, ಕೇಂದ್ರ ಸರ್ಕಾರದ ಮೇಲೆಯೂ ಭ್ರಷ್ಟಚಾರದ ಆರೋಪಗಳಿಲ್ಲವೇ? ನಮ್ಮ ಸರ್ಕಾರದ ಮೇಲೆ ನಿರಾದಾರ ಆರೋಪ ಬಂದಿದೆ. ಆರೋಪಗಳನ್ನು ನಿರಾದಾರ ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ ಎಂದು ಹೇಳಿದರು.

ಮೈತ್ರಿ ಪಕ್ಷಗಳ ಪ್ರಾಸಿಕ್ಯೂಷನ್ ಗೆ ಒತ್ತಾಯಿಸಿ ರಾಜಭವನ ಚಲೋ ವಿಚಾರದ ಕುರಿತು ಮಾತನಾಡಿ, ರಾಜ್ಯಪಾಲರ ನಡೆಯ ಬಗ್ಗೆ ಒಂದಷ್ಟು ಚರ್ಚೆ ಮಾಡಿ ತೀರ್ಮಾನಗಳನ್ನು ಮಾಡಿದ್ದೇವೆ. ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ. ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡುತ್ತೇವೆ ಎಂದರು.

ಇದರ ಜೊತೆಯಲ್ಲೇ ಎಲ್ಲ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದೇವೆ. ಅಷ್ಟರೊಳಗೆ ಕೋರ್ಟ್‌ನಲ್ಲಿ ಏನೆಲ್ಲ ತೀರ್ಮಾನ ಆಗುತ್ತದೆ ಎಂಬುದನ್ನು ನೋಡಬೇಕಿದೆ. ಆನಂತರ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆ.31ರಂದು ರಾಜಭವನ ಚಲೋ ಮಾಡುತ್ತೇವೆ ಎಂದು ಹೇಳಿದರು.

ಶಾಸಕರು ಬಂದು ಹೇಳಿದರೆ ನಾವು ಕೇಳುತ್ತಿದ್ದೆವು ಅನ್ನಬಹುದು. ಹಾಗಾಗಿ ಆ ಪ್ರಯತ್ನವನ್ನು ಕೂಡ ನಾವು ಮಾಡುತ್ತಿದ್ದೇವೆ. ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾದರೆ, ನಾವು ರಾಷ್ಟ್ರಮಟ್ಟದಲ್ಲೇ ಮಾಡಬೇಕಲ್ಲವೇ? ನಮ್ಮ ಪಕ್ಷ ಇಂಡಿಪೆಂಡೆಂಟ್ ಆಗಿ ಮಾಡುತ್ತೀವಾ ಅಥವಾ ಇಂಡಿಯಾ ಒಕ್ಕೂಟ ಸೇರಿ ಮಾಡುವುದ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

By Veeresh

Leave a Reply

Your email address will not be published. Required fields are marked *

Verified by MonsterInsights