ಬೆಂಗಳೂರು: ರಾಮನಗರ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ತನ್ನ ತಂದೆಯ ಹೆಸರಿನಲ್ಲಿ ಇರುವ ಜಮೀನಿನ ಕೃಷಿ ಚಟುವಟಿಕೆಗಳನ್ನು ನೋಡಿಕೊಳ್ಳಲು ಕರ್ನಾಟಕ ಹೈಕೋರ್ಟ್ 90 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಕನಕಪುರ ತಾಲೂಕಿನ ಸಿದ್ದದೇವರಹಳ್ಳಿಯ ಚಂದ್ರು (36) ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಪೆರೋಲ್‌ನಲ್ಲಿ ಬಿಡುಗಡೆ ಮಾಡಬೇಕೆಂಬ ತನ್ನ ಮನವಿಯನ್ನು ಪರಿಗಣಿಸಿದೆ. ಆ ಮೂಲಕ ತಂದೆಯ ವೃತ್ತಿಯಲ್ಲಿ ತೊಡಗಿಕೊಳ್ಳಲು ಜೈಲು ಪಾಲಾಗಿರುವ ಮಗನಿಗೆ ಅವಕಾಶ ಕಲ್ಪಿಸಿದೆ.
ಅರ್ಜಿದಾರ ಚಂದ್ರ 11 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ. ಪ್ರಕರಣದ ಸತ್ಯಾಂಶ ಪರಿಶೀಲಿಸಿದರೆ ಪೆರೋಲ್ ಮೇಲೆ ಬಿಡುಗಡೆ ಯಾಗುವ ಅಗತ್ಯವನ್ನು ಅರ್ಜಿದಾರ ಮೇಲ್ನೋ ಟಕ್ಕೆ ಸಾಬೀತುಪಡಿಸಿದ್ದಾರೆ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ.23ರಂದು ನೀಡಿದ್ದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್, ಪೆರೋಲ್ ಅವಧಿಯಲ್ಲಿ ಚಂದ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಆತ ಪೆರೋಲ್ ಮುಗಿಸಿ, ಕಾರಾಗೃಹಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಆ ಯಾವುದೇ ಷರತ್ತು ಉಲ್ಲಂಘಿಸಿದರೆ, ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ.