ಬೆಂಗಳೂರು: ಏಪ್ರಿಲ್ 15ರಿಂದ ನಡೆಯುವ ಕೆಎಎಸ್ ಹುದ್ದೆಗಳ ಗ್ರೂಪ್ ಎ ಮತ್ತು ಬಿ ನೇಮಕಾತಿಗೆ ನಡೆಯುವ ಮುಖ್ಯ ಪರೀಕ್ಷೆಗೆ ತುಂಬು ಗರ್ಭಿಣಿಯೊಬ್ಬರಿಗೆ ಕಲಬುರಗಿಯಲ್ಲಿ ಪರೀಕ್ಷೆ ಕೇಂದ್ರದ ವ್ಯವಸ್ಥೆ ಮಾಡುವಂತೆ ಕೆಪಿಎಸ್ಸಿಗೆ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ.
ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರವನ್ನು ವ್ಯವಸ್ಥೆ ಮಾಡುವಂತೆ ಮಹಾಲಕ್ಷ್ಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಚಿಲಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನದ ಅಗತ್ಯವಿದೆ ಎಂಬ ಅಂಶವನ್ನು ಪರಿಗಣಿಸಿ, ಸಂವಿಧಾನದ ನಿರ್ಮಾತೃಗಳು ಮಹಿಳೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಹೀಗಾಗಿ, ಅರ್ಜಿದಾರರಿಗೆ ಕಲಬುರಗಿಯಲ್ಲಿ ಪರೀಕ್ಷೆ ನಡೆಸಬೇಕಾಗಿದೆ. ಈ ಕುರಿತು ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಿರುವ ಸಂಬಂಧ ಏಪ್ರಿಲ್ 9ರ ಒಳಗಾಗಿ ಅಭ್ಯರ್ಥಿಗೆ ತಿಳಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, ಅರ್ಜಿದಾರ ಗರ್ಭಿಣಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸದೇ ನಿರಾಕರಿಸುವುದು ಸಂವಿಧಾನದ ಪರಿಚ್ಚೇದ 14 (ಕಾನೂನಿನ ಮುಂದೆ ಸಮಾನ), 15(3)(ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು) ಮತ್ತು 16ರ (ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ) ಅಡಿ ಲಭ್ಯವಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಪೀಠ ಹೇಳಿದೆ.