
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಶಾಸಕರ ವಿದೇಶಿ ಪ್ರವಾಸದ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೈಕಮಾಂಡ್ ಸೂಚನೆಯನ್ನೂ ಮೀರಿ ಶಾಸಕರು ಪ್ರವಾಸಕ್ಕೆ ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಖಡಕ್ ಎಚ್ಚರಿಕೆಯ ಹೊರತಾಗಿಯೂ, ಕಾಂಗ್ರೆಸ್ ಶಾಸಕರು ತಮ್ಮ ವಿದೇಶ ಪ್ರವಾಸದ ಪ್ಲಾನ್‌ನಿಂದ ಹಿಂದೆ ಸರಿದಿಲ್ಲ. ಸುಮಾರು 20ಕ್ಕೂ ಹೆಚ್ಚು ಶಾಸಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಫೆಬ್ರವರಿ 15 ರಿಂದ ಮಾರ್ಚ್ 3ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಇಡೀ ಪ್ರವಾಸದ ಜವಾಬ್ದಾರಿಯನ್ನು ಇಬ್ಬರು ಪ್ರಭಾವಿ ಸಚಿವರು ತೆರೆಮರೆಯಿಂದ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಫೆಬ್ರವರಿ 5ರಂದೇ ಈ ಬಗ್ಗೆ ಸುಳಿವು ಸಿಕ್ಕಾಗ ಸುರ್ಜೇವಾಲಾ ಅವರು ಕೆಲ ಶಾಸಕರಿಗೆ ಕರೆ ಮಾಡಿ ಪ್ರವಾಸ ಕೈಬಿಡುವಂತೆ ಸೂಚಿಸಿದ್ದರು. ಆದರೆ, ಕೇವಲ ಐದಾರು ಶಾಸಕರಷ್ಟೇ ಪ್ರವಾಸದಿಂದ ಹಿಂದೆ ಸರಿದಿದ್ದು, ಉಳಿದವರು ಪ್ರವಾಸಕ್ಕೆ ತಯಾರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿರುವ ವಿಚಾರ ನನ್ನ ಗಮನಕ್ಕೆ ಇಲ್ಲ. ಒಂದು ವೇಳೆ ಅವರು ತಮ್ಮ ಸ್ವಂತ ಹಣದಲ್ಲಿ ಪ್ರವಾಸಕ್ಕೆ ಹೋದರೆ ಬೇಡ ಎಂದು ಹೇಳಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಶಾಸಕರ ಪರವಾಗಿ ಬ್ಯಾಟ್ ಮಾಡಿದ್ದಾರೆ.




