ಮಂಡ್ಯ: 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಸ್ಥಾನದ ಗೊಂದಲವನ್ನು ಬಗೆಹರಿಸಬೇಕು , ಪಕ್ಷದ ಒಳಗಿನ ಈ ಅನಿಶ್ಚಿತತೆಯು ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿದೆ ಎಂದು ಶಾಸಕ ಗಣಿಗ ರವಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರು ನಡೆಸಿದ ಡಿನ್ನರ್ ಮೀಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅದು ಕೇವಲ ಶಾಸಕ ಬಾಲಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಮಟನ್ ಬಿರಿಯಾನಿ ಹಾಗೂ ನಾಟಿ ಸ್ಟೈಲ್ ಊಟದ ಕೂಟವಾಗಿತ್ತು ಈ ಭೇಟಿಯ ಬಗ್ಗೆ ಅನಗತ್ಯ ಊಹಾಪೋಹಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂಬ ಅಂಶವನ್ನು ನೆನಪಿಸಿದ ರವಿಕುಮಾರ್, ತಾವೂ ಸಹ ಅದೇ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ತಮಗೆ ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದೇ ಆದರೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ವೈಯಕ್ತಿಕ ಆಸೆ ಎಂದು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಪ್ರತಿನಿತ್ಯ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೋ ಇಲ್ಲವೋ ಎಂಬ ಚರ್ಚೆಗಳು ನಡೆಯುತ್ತಿರುವುದು ಪಕ್ಷದ ಬೆಳವಣಿಗೆಗೆ ಪೂರಕವಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶಾಸಕರು ಒಟ್ಟಾಗಿ ಸೇರಿದಾಗ ರಾಜಕೀಯ ಮತ್ತು ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಸಹಜ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೇವಲ ಪ್ರವಾಸ ಹೋದ ಮಾತ್ರಕ್ಕೆ ಅಥವಾ ಒಟ್ಟಾಗಿ ಊಟ ಮಾಡಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ ಸದ್ಯಕ್ಕೆ ಹೈಕಮಾಂಡ್ ಭೇಟಿಯ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲವಾದರೂ, ಒಂದು ವೇಳೆ ಅನಿವಾರ್ಯತೆ ಎದುರಾದರೆ ಖಂಡಿತವಾಗಿಯೂ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.


