ಬೆಂಗಳೂರು : ಕೋವಿಡ್ -19 ರೂಪಾಂತರಿ ತಳಿ ಜೆನ್ 1 ರಾಜ್ಯದಲ್ಲಿ ಹರಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ವೈರಸ್ ಜೆನ್1 ರೂಪಾಂತರಿ ಅತ್ಯಂತ ವೇಗವಾಗಿ ವ್ಯಾಪಿಸಿದೆ, ಕರ್ನಾಟಕದಲ್ಲಿ ಕೋರೊನಾ ಸೋಂಕಿಗೆ 64 ವರ್ಷದ ವೃದ್ಧರೊಬ್ಬರು ಐದು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ನಿವಾಸಿಗೆ ಕೊರೊನಾ ಜೊತೆ ಅನ್ಯ ಕಾಯಿಲೆಗಳೂ ಕೂಡ ಇದ್ದವು. ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ಕೋರೊನಾ ಪಾಸಿಟಿವ್ ಕೂಡ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು 5 ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಮೃತ ವ್ಯಕ್ತಿಯ ಕುಟುಂಬದಲ್ಲಿ ಒಟ್ಟು 5 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಐವರಿಗೂ ನೆಗೆಟಿವ್ ಬಂದಿದೆ. ಸದ್ಯ ಐದು ಜನರು ಕೂಡ ಕ್ವಾರಂಟೈನ್ ನಲ್ಲಿ ಇದ್ದಾರೆ. ಮೃತಪಟ್ಟಿದ್ದ ವ್ಯಕ್ತಿಯ ಜೆನೆಮಿಕ್ ಸೀಕ್ವೆನ್ಸ್ ರಿಪೋರ್ಟ್ ಗಾಗಿ ಬಿಬಿಎಂಪಿ ಕಾಯುತ್ತಿದೆ ಎಂದರು.
ದೇಶದಲ್ಲಿ ಒಟ್ಟು 20 ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯ ನಂತರ ಇಂದು ವಿಕಾಸ ಸೌಧದಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಿದರು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. ಜೆಎನ್.1 ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ 20 ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ. ಗೋವಾದಲ್ಲಿ 18, ಮಹಾರಾಷ್ಟ್ರದಲ್ಲಿ 1, ಕೇರಳದಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಹೇಳಿದರು.
ನಾಳೆ ಸಿಎಂ ಟಿಎಸಿ ಸಭೆ: ಕೋವಿಡ್ ಕುರಿತು ನಾಳೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಾಂತ್ರಿಕ ಸಲಹಾ ಸಮಿತಿ ಜತೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.