ರಾಜಕೀಯರಾಜ್ಯ

ಡಿ.ಕೆ. ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಏಕವಚನದಲ್ಲೇ ಗುಡುಗು

ರಾಮನಗರ: “ನನಗೆ ಮಾತನಾಡುವ ಚಪಲ ಇರಬಹುದು, ಆದರೆ ಅವನಿಗೆ ಲೂಟಿ ಹೊಡೆಯುವ ಚಪಲವಿದೆ,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಿ.ಕೆ. ಸುರೇಶ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಡಿಕೆಶಿ ತಮ್ಮ (ಸುರೇಶ್) ಮೊನ್ನೆ ಏನೋ ಹೇಳಿದ್ದಾನೆ, ನಮಗೆ ಮಾತನಾಡುವ ಚಪಲವಂತೆ. ಹೌದು, ನನಗೆ ಜನರ ಪರ ಮಾತನಾಡುವ ಚಪಲವಿದೆ. ಆದರೆ ಅವನಿಗೆ ಲೂಟಿ ಮಾಡುವ ಚಪಲ. ನಾನು ಯಾರ ಜಮೀನನ್ನೂ ಕಬಳಿಸಿಲ್ಲ, ಕಲ್ಲು ಬಂಡೆ ಒಡೆದು ಜೀವನ ಮಾಡಿಲ್ಲ,” ಎಂದು ಪರೋಕ್ಷವಾಗಿ ಅಕ್ರಮ ಗಣಿಗಾರಿಕೆಯ ಆರೋಪ ಹೊರಿಸಿದರು.

“ಯಾರಿಗೂ ಅಧಿಕಾರ ಶಾಶ್ವತವಲ್ಲ. ನನ್ನನ್ನು ರಾಮನಗರದಿಂದ ಯಾರೂ ಓಡಿಸಲು ಸಾಧ್ಯವಿಲ್ಲ. 2028ಕ್ಕೆ ಗೆದ್ದು ಇಲ್ಲಿ ನಿಜವಾದ ರಾಮರಾಜ್ಯ ತರುತ್ತೇನೆ,” ಎಂದು ಶಪಥ ಮಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಹೆಚ್​ಡಿ ಕುಮಾರಸ್ವಾತಿ ತಿರುಗೇಟು ನೀಡಿದ್ದಾರೆ.. 2018ರಲ್ಲಿ ಸಿದ್ದರಾಮಯ್ಯ ಅವರು ‘ಅಪ್ಪರಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ’ ಎಂದಿದ್ದರು. ಆದರೆ ಫಲಿತಾಂಶ ಬಂದ ಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಯಾರು? ಈ ಕಾಂಗ್ರೆಸ್ ಸರ್ಕಾರದ ಆಯಸ್ಸು ಕೇವಲ ಎರಡು ವರ್ಷ ಮಾತ್ರ, ಎಂದು ಭವಿಷ್ಯ ನುಡಿದರು. ನನಗೆ ಸಿಎಂ ಆಗುವುದು ಮುಖ್ಯವಲ್ಲ, ರಾಜ್ಯದಲ್ಲಿ ಜನಪರ ಸರ್ಕಾರ ತರುವುದು ಮುಖ್ಯ,” ಎಂದರು.

ಇನ್ನು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ನೀಡಿದ ಹೆಚ್​ಡಿಕೆ “ರಾಮನಗರದ ಮಂದಿ ನನ್ನನ್ನು ಮನೆ ಮಗನಂತೆ ಸ್ವೀಕರಿಸಿದ್ದಾರೆ. ಮಂಡ್ಯ ಜನರ ಒತ್ತಡಕ್ಕೆ ಮಣಿದು ಅಲ್ಲಿಗೆ ಹೋದೆ ಅಷ್ಟೇ. ನನ್ನ ಅಂತಿಮ ಹೋರಾಟಗಳು ಮತ್ತು ರಾಜಕೀಯ ಜೀವನ ರಾಮನಗರದಲ್ಲೇ ನಡೆಯಲಿದೆ,” ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತ್ತೆ ರಾಮನಗರದಿಂದಲೇ ಸ್ಪರ್ಧಿಸುವ ಮುನ್ಸೂಚನೆ ನೀಡಿದರು.

Comments (0)

Your email address will not be published. Required fields are marked *

Back to top button