ಮಂಡ್ಯ: ಇತ್ತೀಚೆಗೆ ನಾನು ನೀಡಿದ್ದ ಹೇಳಿಕೆಯಿಂದ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕ್ಷಮೆಯಾಚಿಸಿದ್ದಾರೆ..
ಮಂಡ್ಯದ ವಿಸಿ ಫಾರಂನಲ್ಲಿ ನಡೆದ ಕೃಷಿ ಮೇಳದಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ್ದ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಯಾವುದೇ ರೀತಿಯ ಅಪಚಾರ ಆಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆಂದ ಅವರು, ನಮ್ಮ ನಿಷ್ಠೆ ಹೃದಯದಲ್ಲಿದೆ, ಅದನ್ನು ಹೊರಗೆ ತೋರಿಸಿಕೊಳ್ಳಬೇಕಾಗಿಲ್ಲ. ಪರಮಪೂಜ್ಯರಿಗೆ ನನ್ನಿಂದ ಏನಾದರೂ ಅಪಚಾರ ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಸ್ವಾಮೀಜಿಗಳು ಅವರದ್ದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಇಂತಹ ಸ್ವಾಮಿಗಳು ಇಲ್ಲಿಗೆ ಬರಬಾರದು. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಅವರನ್ನು ಬಳಕೆ ಮಾಡಿಕೊಳ್ಳಬಾರದು ಎಂದಿದ್ದೆ. ನಮ್ಮ ಹಾಗೂ ದೊಡ್ಡ ಸ್ವಾಮೀಜಿಗಳ ಸಂಬಂಧ ಹಲವರಿಗೆ ಗೊತ್ತಿಲ್ಲ ಎಂದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳು ಏನು ನಡೆಯುತ್ತಿವೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ನಮ್ಮ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದಾರೆ. ಅವರು ಮಾತಾಡಿದ್ದಕ್ಕೆ ಇನ್ಯಾರೋ ಮಾತಾಡಿದ್ದಾರೆ. ನಮ್ಮ ಸ್ವಾಮೀಜಿಯಷ್ಟು ಶಿಕ್ಷಣ ಹೊಂದಿರುವವರು ದೇಶದ ಇತಿಹಾಸದಲ್ಲಿ ಮತ್ತೊಬ್ಬರು ಯಾರು ಇಲ್ಲ ಎಂದಿದ್ದಾರೆ.
ಈ ಹಿಂದೆ ಹೆಚ್.ಡಿ.ಕೆ, ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಅಧಿಕಾರ ಕಳೆದುಕೊಂಡಾಗ ಯಾವುದೇ ಮಠಾಧೀಶರ ನೆರವು ಕೇಳಿರಲಿಲ್ಲ. ಮಠಾಧೀಶರ ಕೆಲಸವೇ ಬೇರೆ ಎಂದು ಹೇಳಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತೀಯ ರಾಜಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತದೆ ಹೊರತು ಯಾರಿಗೂ ಲಾಭವಿಲ್ಲ. ಇದು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದಿದ್ದರು.


