ಬೆಂಗಳೂರು : ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯ ರಾಜಕೀಯ ನಡೆ ಪ್ರತಿ ಹಂತದಲ್ಲೂ ಚರ್ಚೆ ಆಗುತ್ತೆ. ವಿಧಾನಸಭಾ ಚುನಾವಣೆಯನ್ನ ಹೀನಾಯವಾಗಿ ಸೋತ ಮೇಲಂತೂ, ಕುಮಾರಸ್ವಾಮಿ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆ ಇತ್ತು. ಕೊನೆಗೆ ಬಿಜೆಪಿ ಜೊತೆ ಹಳೇ ದೋಸ್ತಿಗೆ ಜೈ ಎಂದು, ಕಾಂಗ್ರೆಸ್ ವಿರುದ್ಧ ಕತ್ತಿ ಮಸಿಯೋಕೆ ಕಾಯ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯನ್ನ ಕುಟುಂಬ ಸಮೇತ ಭೇಟಿಯಾದ ಕುಮಾರಣ್ಣ, ಮುಂದಿನ ಲೋಕಸಭೆಗೆ ಸ್ಪರ್ಧಿಸೋ ಬಗ್ಗೆ ರಾಜಕಾರಣದಲ್ಲಿ ಗುಸುಗುಸು ಚರ್ಚೆ ಆಗ್ತಿದೆ. ಆದ್ರೆ, ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ.
2019ರಲ್ಲಿ ಸಿಎಂ ಆಗಿದ್ದಾಗಲೇ ಮಗ ನಿಖಿಲ್ ನನ್ನ ಮಂಡ್ಯದಿಂದ ನಿಲ್ಲಿಸಿ, ಗೆಲ್ಲಿಸಿಕೊಳ್ಳೋಕೆ ಆಗಲಿಲ್ಲ. ಆಗ ಗೆದ್ದ ಸುಮಲತಾ ಅಂಬರೀಶ್, ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾರೆ. ಕುಮಾರಸ್ವಾಮಿ ಕೂಡ ಬಿಜೆಪಿ ಜೊತೆಯಲ್ಲೇ ಸ್ನೇಹ ಸಂಬಂಧ ಬೆಳೆಸಿದ್ದಾರೆ. ಹೀಗಿರುವಾಗ ಮಂಡ್ಯ ಲೋಕಸಭೆಯಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಂತೆ ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆದ್ರೆ, ಮಂಡ್ಯ ಗೌಡ್ತಿ ಸುಮಲತಾ, ಯಾವುದೇ ಕಾರಣಕ್ಕೂ ಮಂಡ್ಯ ಬಿಟ್ಕೊಡಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ. ಬಿಜೆಪಿ ಟಿಕೆಟ್ ಕೊಟ್ರೆ ನಿಲ್ತೀನಿ.. ಕೊಡಲಿಲ್ಲ ಅಂದ್ರೂ ಮತ್ತದೇ ಸ್ವಾಭಿಮಾನಿಯಾಗಿ ಮಂಡ್ಯದಲ್ಲೇ ಪಕ್ಷೇತರವಾಗಿಯೇ ರಣರಂಗದಲ್ಲೇ ಉಳಿಯೋದಾಗಿ ಘೋಷಣೆ ಮಾಡಿಯಾಗಿದೆ.
ಸುಮಲತಾ ಪಟ್ಟು ಹಿಡಿದಿರೋದು ಬಿಜೆಪಿ, ಜೆಡಿಎಸ್ ಗೆ ಇಕ್ಕಟ್ಟಾಗಿದ್ರೆ, ಕಾಂಗ್ರೆಸ್ ಹೊಸ ದಾಳ ಹುರುಳಿಸೋ ಪ್ಲಾನ್ ಮಾಡ್ತಿದೆ. ಈ ನಡುವೆ, 2019ರಲ್ಲಿ ದೇವೇಗೌಡರು ಸ್ಪರ್ಧಿಸಿ ಸೋತ ತುಮಕೂರಿನತ್ತ ಕುಮಾರಸ್ವಾಮಿ ಮುಖ ಮಾಡ್ತಾರೆ ಅನ್ನೋ ಸುದ್ದಿ ಸಖತ್ ಸದ್ದು ಮಾಡ್ತಿದೆ. ಇದಕ್ಕೆ ತಕ್ಕಂತೆ ಕುಮಾರಸ್ವಾಮಿ ತುಮಕೂರು ಭೇಟಿ ಕೂಡ, ಇದಕ್ಕೆ ಪುಷ್ಠಿ ನೀಡುವಂತಿದೆ. ಸೋತಲ್ಲೇ ಗೆಲ್ಲಬೇಕು ಅಂತ ದೇವೇಗೌಡರು, ಕುಮಾರಸ್ವಾಮಿ ಸಾಕಷ್ಟು ಬಾರಿ ಹೇಳಿದ್ರು. ಹೀಗಾಗಿ ಕುಮಾರಸ್ವಾಮಿ ತುಮಕೂರಿನತ್ತ ಮುಖ ಮಾಡಿದ್ರಾ ಅನ್ನೋ ಚರ್ಚೆ ಆಗ್ತಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕೆ ಇಳಿದ್ರೆ, ಲಿಂಗಾಯತ-ಒಕ್ಕಲಿಗ ಜಾತಿ ಸಮೀಕರಣದಿಂದ ಗೆಲ್ಲಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.
ಲೋಕಸಭೆಯಲ್ಲಿ ಸ್ಪರ್ಧೆ ಮಾಡಿ, ಗೆದ್ದು ಮುಂದೆ ಮೋದಿ ಸಚಿವ ಸಂಪುಟದಲ್ಲಿ ಮಂತ್ರಿಯಾಗ್ತಾರಂತೆ ಕುಮಾರಣ್ಣ ಅಂತ ಅದಾಗಲೇ ಬೆಂಬಲಿಗರು ಡಂಗೂರ ಹೊಡೀತಿದ್ದಾರೆ. ಹೇಗಿದ್ರೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೈದು ವರ್ಷ ಇದ್ದೇ ಇರುತ್ತೆ. ಈ ಗ್ಯಾಪಲ್ಲಿ ಸೆಂಟ್ರಲ್ ಮಿನಿಸ್ಟರ್ ಆಗೋ ಪ್ಲಾನ್ ಕುಮಾರಸ್ವಾಮಿಯದ್ದು ಅಂತ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗ್ತಿದೆ.
ಆದ್ರೆ, ಈ ಹಿಂದೆ ಜೆಡಿಎಸ್ ನಲ್ಲಿದ್ದ ಗುಬ್ಬಿ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಗೌರಿಶಂಕರ್, ಮಾಜಿ ಎಂಎಲ್ ಸಿ ಕಾಂತರಾಜು ಈಗ ಕಾಂಗ್ರೆಸ್ನಲ್ಲಿ ಇದ್ದಾರೆ. ಹೀಗಾಗಿ ಜೆಡಿಎಸ್ ಗೆ ಸ್ಥಳೀಯ ನಾಯಕತ್ವದ ಕೊರತೆ ಕಾಡ್ತಿರೋದು ಸುಳ್ಳಲ್ಲ. ಬಿಜೆಪಿಯಲ್ಲೂ ಕೂಡ ಒಗ್ಗಟ್ಟಿನ ಪ್ರದರ್ಶನ ಕಾಣ್ತಿಲ್ಲ. ಮುದ್ದಹನುಮೇಗೌಡ ಸೈಲೆಂಟಾಗಿದ್ರೆ, ಸೋಮಣ್ಣ ಏನ್ಮಾಡ್ತಾರೆ ಅನ್ನೋ ಕುತೂಹಲ ಇದೆ. ಜೊತೆಗೆ ತುಮಕೂರಿಂದ ಸ್ಪರ್ಧೆ ಮಾಡೋಕೆ ಬಿಜೆಪಿಯಲ್ಲಿ ದೊಡ್ಡ ಪಟ್ಟಿಯೇ ಇದೆ. ಹೀಗಾಗಿ ಕುಮಾರಸ್ವಾಮಿ ತುಮಕೂರಿಗೆ ಹೋದ್ರೂ, ಗೆಲುವು ಎಷ್ಟು ಸುಲಭ..? ಸದ್ಯಕ್ಕೆ ಯಕ್ಷ ಪ್ರಶ್ನೆ.
ಇಷ್ಟೆಲ್ಲಾ ಇದ್ರೂ, ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯದ ಆಳ-ಅಗಲವನ್ನ ಅಳೆಯೋದು ಅಷ್ಟು ಸುಲಭವಲ್ಲ. ರಾಜಕೀಯ ಚದುರಂದಲ್ಲಿ ಯಾವ ಟೈಮಲ್ಲಿ ಯಾವ ಆಟ ಆಡ್ತಾರೋ ಏನೋ.