ಬೆಂಗಳೂರು: ಇನ್‌ಸ್ಟಾಗ್ರಾಮ್ ಅನ್ನೋದು ಬಣ್ಣದ ಲೋಕ ಮಾತ್ರವಲ್ಲ, ಕೆಲವೊಮ್ಮೆ ಅದು ಅಪಾಯಕಾರಿ ವ್ಯಕ್ತಿಗಳ ಅಡ್ಡಾವೂ ಹೌದು ಎಂಬುದಕ್ಕೆ ಈ ಘಟನೆ ಸಾಕ್ಷಿ. ತನ್ನ ಸೌಂದರ್ಯ ಮತ್ತು ಫಿಟ್ನೆಸ್ ಮೂಲಕ ಸಾವಿರಾರು ಫಾಲೋವರ್ಸ್ ಹೊಂದಿದ್ದ ಬೆಂಗಳೂರಿನ ಲೇಡಿ ಫಿಟ್ನೆಸ್ ಇನ್‌ಫ್ಲೂಯೆನ್ಸರ್ ಒಬ್ಬರಿಗೆ ಹರಿಯಾಣದ ಯುವಕನೊಬ್ಬ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೊನೆಗೂ ಈ ‘ಸೈಕೋ’ ಪ್ರೇಮಿಯ ಆಟಕ್ಕೆ ಬೆಂಗಳೂರು ಪೊಲೀಸರು ಬ್ರೇಕ್ ಹಾಕಿದ್ದಾರೆ.
ಇನ್‌ಸ್ಟಾದಲ್ಲಿ ಶುರುವಾದ ಕಿರಿಕ್, ವಾಟ್ಸಾಪ್‌ನಲ್ಲಿ ಅಶ್ಲೀಲ ಹಾವಳಿ!
ಬೆಂಗಳೂರಿನಲ್ಲಿ ಫಿಟ್ನೆಸ್ ಮತ್ತು ನ್ಯೂಟ್ರಿಷಿಯನ್ ಇನ್‌ಫ್ಲೂಯೆನ್ಸರ್ ಆಗಿ ಜನಪ್ರಿಯತೆ ಗಳಿಸಿದ್ದ ಮಹಿಳೆಯನ್ನು ಹರಿಯಾಣ ಮೂಲದ ಸುಧೀರ್ ಕುಮಾರ್ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸಲು ಶುರು ಮಾಡಿದ್ದ. ಆರಂಭದಲ್ಲಿ ಕೇವಲ ಮೆಸೇಜ್ ಮಾಡುತ್ತಿದ್ದವನು, ನಂತರ ಆಕೆಯ ವಾಟ್ಸಾಪ್ ಸಂಖ್ಯೆ ಪಡೆದು ತನ್ನ ಅಸಲಿ ರೂಪ ತೋರಿಸಿದ್ದಾನೆ. ನಿರಂತರವಾಗಿ ಅಶ್ಲೀಲ ಸಂದೇಶ ಹಾಗೂ ಲೈಂಗಿಕ ಪ್ರಚೋದನೆಯ ಮೆಸೇಜ್‌ಗಳನ್ನು ಕಳುಹಿಸಿ ಮಹಿಳೆಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಹರಿಯಾಣದಿಂದ ಬೆಂಗಳೂರಿಗೆ ಲಗ್ಗೆ ಇಟ್ಟ
ಆರೋಪಿ ಸುಧೀರ್ ಕುಮಾರ್ ಪಟ್ಟ ಅಷ್ಟಕ್ಕೇ ಮುಗಿಯಲಿಲ್ಲ. ಮಹಿಳೆಯ ಕುಟುಂಬ ಸದಸ್ಯರ ವಿಳಾಸ ಪತ್ತೆ ಹಚ್ಚಿ ಹರಿಯಾಣದಲ್ಲೇ ಅವರಿಗೆ ತೊಂದರೆ ಕೊಡಲು ಆರಂಭಿಸಿದ್ದ. ಅಷ್ಟೇ ಅಲ್ಲದೆ, ಮಹಿಳೆಯನ್ನು ಹೇಗಾದರೂ ಮಾಡಿ ಭೇಟಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಈತ, ಸುಮಾರು ಎರಡು ಸಾವಿರ ಕಿಲೋಮೀಟರ್ ದೂರದ ಹರಿಯಾಣದಿಂದ ಬೆಂಗಳೂರಿಗೆ ಬಂದಿಳಿದಿದ್ದಾನೆ!
ಬೆಂಗಳೂರಿಗೆ ಬಂದವನೇ ಆಕೆ ಕೆಲಸ ಮಾಡುವ ಜಿಮ್ ಮತ್ತು ಆಕೆಯ ಸಹೋದ್ಯೋಗಿಗಳ ಬಳಿ ಹೋಗಿ ಮಾಹಿತಿ ಕಲೆಹಾಕಲು ಯತ್ನಿಸಿದ್ದಾನೆ. ಈ ವಿಚಾರ ಮಹಿಳೆಗೆ ತಿಳಿಯುತ್ತಿದ್ದಂತೆ ಆಕೆ ಬೆಚ್ಚಿಬಿದ್ದಿದ್ದಾರೆ. ತನ್ನ ಪ್ರಾಣಕ್ಕೆ ಅಪಾಯವಿರುವುದನ್ನು ಅರಿತ ಇನ್‌ಫ್ಲೂಯೆನ್ಸರ್ ಕೂಡಲೇ ಪೊಲೀಸ್ ಮೆಟ್ಟಿಲೇರಿದ್ದಾರೆ.
ಪೊಲೀಸರ ಬಲೆಗೆ ಬಿದ್ದ ಸುಧೀರ್
ಮಹಿಳೆಯ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿ ಸುಧೀರ್ ಕುಮಾರ್‌ನನ್ನು ಹುಡುಕಿ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಹರಿಯಾಣ ಮೂಲದ ಈ ಕಿರಾತಕ ಈಗ ಕಂಬಿ ಎಣಿಸುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂಬ ಆತಂಕದ ನಡುವೆಯೇ ಪೊಲೀಸರ ಈ ತ್ವರಿತ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನೆನಪಿರಲಿ: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜೊತೆ ವ್ಯವಹರಿಸುವಾಗ ಎಚ್ಚರವಿರಲಿ. ಯಾರಾದರೂ ಕಿರುಕುಳ ನೀಡಿದರೆ ತಕ್ಷಣ ಪೊಲೀಸರಿಗೆ ದೂರು ನೀಡಿ.


