Top Newsಸುದ್ದಿ

ಭಾರತದ ‘ಮಹಾರತ್ನ’ ಪಟ್ಟ ಗಿಟ್ಟಿಸಿದ ಎಚ್​ಎಎಲ್; ಈ ಗೌರವ ಸಿಗಲು ಮಾನದಂಡಗಳೇನು..?

ನವದೆಹಲಿ: ಒಂದು ಸಮಯದಲ್ಲಿ ಮುಚ್ಚೇ ಹೋಗಬಹುದೇನೋ ಎನ್ನುವಂತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ ಇವತ್ತು ಭಾರತದ ವೈಭವದ ಕಥೆ ಹೇಳಲು ಮುಂಚೂಣಿಯಲ್ಲಿದೆ. ಭಾರತದ ಮಿಲಿಟರಿಗೆ ಎಚ್​ಎಎಲ್ ಹಲವು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಡುತ್ತಿದೆ. ಭಾರತದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಅದು ಒಂದಾಗಿದೆ. ಅಂತೆಯೇ, ಇದೀಗ ಎಚ್​ಎಎಲ್​ಗೆ ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ. ಇದರೊಂದಿಗೆ ಎಚ್​ಎಎಲ್ ಭಾರತದ 14ನೇ ಮಹಾರತ್ನ ಸಂಸ್ಥೆಯಾಗಿದೆ. ಕೇಂದ್ರದ ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ನಿನ್ನೆ (ಅ. 12) ಈ ವಿಚಾರವನ್ನು ಬಹಿರಂಗಪಡಿಸಿದೆ.

‘ನವರತ್ನ’ ಸ್ಥಾನ ಹೊಂದಿದ್ದ ಎಚ್​ಎಎಲ್ ಅನ್ನು ‘ಮಹಾರತ್ನ’ ಸ್ಥಾನಕ್ಕೇರಿಸಲು ಎರಡು ಉನ್ನತ ಮಟ್ಟದ ಸಮಿತಿಗಳು ಶಿಫಾರಸು ಮಾಡಿದ್ದವು. ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದ ಅಂತರ ಸಚಿವೀಯ ಸಮಿತಿ (ಐಎಂಸಿ), ಹಾಗೂ ಸಂಪುಟ ಕಾರ್ಯದರ್ಶಿ ನೇತೃತ್ವದ ಏಪೆಕ್ಸ್ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು.

ಮಹಾರತ್ನ ಸ್ಥಾನದಿಂದ ಏನು ಲಾಭ?

ಮಹಾರತ್ನ ಸ್ಥಾನಮಾನ ಪಡೆದ ಸರ್ಕಾರಿ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಕಡಿಮೆ ಇರುತ್ತದೆ. ಅದರ ಕಾರ್ಯಾಚರಣೆಯ ಸ್ವಾಯತ್ತತೆ ಹೆಚ್ಚಿರುತ್ತದೆ. ಅಂದರೆ, ಹೆಚ್ಚಿನ ಮೊತ್ತದ ವ್ಯವಹಾರಗಳನ್ನು ಸರ್ಕಾರದ ಅನುಮತಿ ಇಲ್ಲದೇ ಸ್ವತಂತ್ರವಾಗಿ ತೆಗೆದುಕೊಳ್ಳಬಹುದು. ಈಗ ಮಹಾರತ್ನ ಸ್ಥಾನ ಪಡೆದಿರುವ ಎಚ್​ಎಎಲ್ ಸಂಸ್ಥೆ ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.

ಮಹಾರತ್ನ ಸ್ಥಾನ ಪಡೆಯಲು ಅರ್ಹತೆಗಳೇನು?

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಅವುಗಳ ಕ್ಷಮತೆ ಮತ್ತು ವಿಶಾಲತೆಯ ಆಧಾರದ ಮೇಲೆ ಮಹಾರತ್ನ, ನವರತ್ನ, ಮಿನಿರತ್ನ 1, ಮಿನಿರತ್ನ 2 ಎಂದು ವರ್ಗೀಕರಿಸಲಾಗಿದೆ. ಮಹಾರತ್ನ ಎಂಬುದು ಅತ್ಯುಚ್ಚ ಮಟ್ಟದ್ದಾಗಿರುತ್ತದೆ. ಮಹಾರತ್ನ ಪಟ್ಟಿಯಲ್ಲಿ ಎಚ್​ಎಲ್ ಸೇರ್ಪಡೆ ಬಳಿಕ 14 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿವೆ. ನವರತ್ನ ವಿಭಾಗದಲ್ಲಿ 24 ಸಂಸ್ಥೆಗಳಿವೆ. ಮಿನಿರತ್ನ-1 ಕೆಟಗರಿಯಲ್ಲಿ 51 ಕಂಪನಿಗಳಿದ್ದರೆ, ಮಿನಿರತ್ನ-2 ವಿಭಾಗದಲ್ಲಿ 11 ಸಂಸ್ಥೆಗಳಿವೆ. ಮಹಾರತ್ನ ಸ್ಥಾನ ಪಡೆಯಲು ಇರುವ ಮಾನದಂಡಗಳೇನು ಎಂಬ ವಿವರ ಇಲ್ಲಿದೆ:

ಭಾರತದಲ್ಲಿ ಸಾರ್ವಜನಿಕ ವಲಯದ ಉದ್ಯಮದಲ್ಲಿ ಈ ಕಂಪನಿಗಳು ರಾಷ್ಟ್ರದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಕಳೆದ ಮೂರು ವರ್ಷದಲ್ಲಿ ಕನಿಷ್ಠ 5,000 ಕೋಟಿ ರೂನಷ್ಟಾದರೂ ವಾರ್ಷಿಕ ಸರಾಸರಿ ನಿವ್ವಳ ಲಾಭ ಹೊಂದಿರಬೇಕು. ಕಳೆದ ಮೂರು ವರ್ಷದಲ್ಲಿ ಸರಾಸರಿ ವಾರ್ಷಿಕ ವಹಿವಾಟು 25,000 ಕೋಟಿ ರೂ ಇರಬೇಕು. ಜಾಗತಿಕವಾಗಿ ಅದು ಕಾರ್ಯಾಚರಿಸುತ್ತಿರಬೇಕು. ಅಂದರೆ, ಅಂತಾರಾಷ್ಟ್ರೀಯ ಉಪಸ್ಥಿತಿ ಇರಬೇಕು. ಎಚ್​ಎಎಲ್ ಸಂಸ್ಥೆ 2023-24ರ ಹಣಕಾಸು ವರ್ಷದಲ್ಲಿ 28,162 ಕೋಟಿ ರೂ ಬಿಸಿನೆಸ್ ಪಡೆದಿದೆ. ನಿವ್ವಳ ಲಾಭ 7,595 ಕೋಟಿ ರೂ ಇದೆ.

ಮಹಾರತ್ನ ಸ್ಥಾನ ಪಡೆದ ಭಾರತದ ಸರ್ಕಾರಿ ಸಂಸ್ಥೆಗಳ ಪಟ್ಟಿ

  1. ಬಿಎಚ್​ಇಎಲ್
  2. ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್)
  3. ಕೋಲ್ ಇಂಡಿಯಾ
  4. ಜಿಎಐಎಲ್ ಇಂಡಿಯಾ
  5. ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್​ಪಿಸಿಎಲ್)
  6. ಇಂಡಿಯನ್ ಆಯಿಲ್ (ಐಒಸಿಎಲ್)
  7. ಎನ್​ಟಿಪಿಸಿ
  8. ಒಎನ್​ಜಿಸಿ
  9. ಪವರ್ ಫೈನಾನ್ಸ್ ಕಾರ್ಪೊರೇಶನ್
  10. ಪವರ್ ಗ್ರಿಡ್ ಕಾರ್ಪೊರೇಶನ್
  11. ಸ್ಟೀಲ್ ಅಥಾರಿಟಿ (ಎಸ್​ಎಐಎಲ್)
  12. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್
  13. ಆಯಿಲ್ ಇಂಡಿಯಾ
  14. ಎಚ್​ಎಎಲ್

Comments (0)

Your email address will not be published. Required fields are marked *

Back to top button