ಬೆಂಗಳೂರು: ಜಿಎಸ್ಟಿ ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಟ್ಯಾಕ್ಸ್ ನೋಟಿ ಜಾರಿ ಮಾಡಿದ್ದು ಸಣ್ಣ ವ್ಯಾಪಾರಸ್ಥರನ್ನು ಕಂಗಾಲಾಗುವಂತೆ ಮಾಡಿತ್ತು. ಅಷ್ಟೇ ಅಲ್ಲದೇ ವಾಣಿಜ್ಯ ತೆರಿಗೆ ಇಲಾಖೆಯ ಟ್ಯಾಕ್ಸ್ ನೋಟಿಸ್ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬುಧವಾರ ಸಿಎಂ ಸಿದ್ದರಾಮಯ್ಯ ಅವರು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕರ ಸಂಘದ ಪ್ರತಿನಿಧಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೋಟಿಸ್ ನೀಡಿದ ವರ್ತಕರಿಂದ ಬಾಕಿ ತೆರಿಗೆ ವಸೂಲಿ ಮಾಡುವುದಿಲ್ಲ. ಆದರೆ ವರ್ತಕರು ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು. ಈಗ ಕೊಟ್ಟಿರುವ ನೋಟಿಸ್ ಮೇಲೆ ವಸೂಲಾತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಲು, ಹಣ್ಣು, ತರಕಾರಿ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದರೂ ತೆರಿಗೆ ವಸೂಲಾತಿ ಮಾಡುವುದಿಲ್ಲ. ಆದ್ರೆ ಯಾರು ಕಾಯ್ದೆ ಪ್ರಕಾರವಾಗಿ ತೆರಿಗೆ ಕಟ್ಟಬೇಕಾಗಿದೆಯೂ ಅವರು ಮಾತ್ರ ತೆರಿಗೆ ಕಟ್ಟಲೇಬೇಕು. ನೋಟಿಸ್ ನೀಡಲಾಗಿರುವ ಹಳೆಯ ತೆರಿಗೆ ಮನ್ನಾ ಮಾಡಲಾಗುವುದು. ಆದ್ರೆ ಇನ್ಮುಂದೆ ಎಲ್ಲರೂ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟ ಸಂದೇಶ ನೀಡಿದ್ರು.
ಇನ್ನು ಯುಪಿಐ ಬೇಡ ಅಭಿಯಾನವನ್ನು ಪ್ರಾರಂಭಿಸಿ ಹಾಲಿನಂತಹ ಅಗತ್ಯ ವಸ್ತುಗಳನ್ನು ಬಹಿಷ್ಕರಿಸಿ ನಗರದಾದ್ಯಂತ ಕಪ್ಪುಪಟ್ಟಿ ಕಟ್ಟಿ ಚಹಾ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದ ವ್ಯಾಪಾರಿಗಳು, ಜುಲೈ 25 ರಂದು ಯೋಜಿಸಲಾದ ಪ್ರತಿಭಟನೆಯನ್ನು ಸಿಎಂ ಭರವಸೆ ಬಳಿಕ ಹಿಂದಕ್ಕೆ ತೆಗೆದುಕೊಂಡಿದ್ದಾರೆ.


