ದಾವೋಸ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ‘ವಿಸ್ತರಣಾ ಭೂಪಟ’ ಮತ್ತು ಸುಂಕ ನೀತಿಗಳ ವಿರುದ್ಧ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕಿಡಿಕಾರಿದ್ದಾರೆ. ಗ್ರೀನ್‌ಲ್ಯಾಂಡ್ ಮತ್ತು ಕೆನಡಾವನ್ನು ಅಮೆರಿಕದ ಭಾಗವಾಗಿ ತೋರಿಸಿರುವ ಟ್ರಂಪ್ ಅವರ ನಿಲುವನ್ನು ತೀವ್ರವಾಗಿ ಖಂಡಿಸಿರುವ ಕಾರ್ನಿ, ಅಂತರಾಷ್ಟ್ರೀಯ ನಿಯಮಗಳ ರಕ್ಷಣೆಗೆ ಮಧ್ಯಮ ಗಾತ್ರದ ದೇಶಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್‌ಗೆ ಸಾಥ್: ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿರುವ ಟ್ರಂಪ್ ನಿಲುವನ್ನು ಪ್ರಶ್ನಿಸಿರುವ ಕಾರ್ನಿ, ಆರ್ಕ್ಟಿಕ್ ಸಾರ್ವಭೌಮತ್ವದ ವಿಷಯದಲ್ಲಿ ಕೆನಡಾವು ಗ್ರೀನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಪರವಾಗಿ ದೃಢವಾಗಿ ನಿಲ್ಲಲಿದೆ ಎಂದು ಘೋಷಿಸಿದರು. “ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಆ ದೇಶದ ಜನರಿಗೆ ಮಾತ್ರ ಇದೆ. ಬಾಹ್ಯ ಶಕ್ತಿಗಳ ದೌರ್ಜನ್ಯವನ್ನಲ್ಲ,” ಎಂದು ಅವರು ಟ್ರಂಪ್ ಆಡಳಿತಕ್ಕೆ ನೇರ ಸಂದೇಶ ರವಾನಿಸಿದ್ದಾರೆ.
ಸುಂಕ ನೀತಿಯೇ ‘ಶಸ್ತ್ರಾಸ್ತ್ರ’ – ಕಾರ್ನಿ ಆಕ್ರೋಶ: ಗ್ರೀನ್‌ಲ್ಯಾಂಡ್ ಬೆಂಬಲಿಸುವ ರಾಷ್ಟ್ರಗಳ ಮೇಲೆ ಅಮೆರಿಕಾ ವಿಧಿಸುತ್ತಿರುವ ಸುಂಕಗಳನ್ನು ಟೀಕಿಸಿರುವ ಕೆನಡಾ ಪ್ರಧಾನಿ, “ಪ್ರಬಲ ರಾಷ್ಟ್ರಗಳು ಆರ್ಥಿಕ ಏಕೀಕರಣವನ್ನು ಶಸ್ತ್ರಾಸ್ತ್ರಗಳನ್ನಾಗಿ ಬಳಸುತ್ತಿವೆ. ಪೂರೈಕೆ ಸರಪಳಿಗಳನ್ನು ದುರ್ಬಲಗೊಳಿಸಿ, ಸುಂಕಗಳ ಮೂಲಕ ಲಾಭ ಗಳಿಸಲು ಮತ್ತು ಇತರ ದೇಶಗಳನ್ನು ಒತ್ತಡಕ್ಕೆ ಸಿಲುಕಿಸಲು ಯತ್ನಿಸುತ್ತಿವೆ,” ಎಂದು ಹರಿಹಾಯ್ದಿದ್ದಾರೆ.
“ಮಧ್ಯಮ ರಾಷ್ಟ್ರಗಳೇ ಎಚ್ಚರ”: ಬಲಿಷ್ಠ ರಾಷ್ಟ್ರಗಳು ತಮ್ಮ ಇಷ್ಟಬಂದಂತೆ ನಿಯಮಗಳನ್ನು ಮುರಿಯುತ್ತಿವೆ ಎಂದು ಆರೋಪಿಸಿದ ಅವರು, “ನಾವು ಪ್ರಬಲ ರಾಷ್ಟ್ರಗಳ ಸ್ಪರ್ಧೆಯ ಯುಗದಲ್ಲಿದ್ದೇವೆ. ಇಲ್ಲಿ ನಿಯಮ ಆಧಾರಿತ ವ್ಯವಸ್ಥೆ ಮರೆಯಾಗುತ್ತಿದೆ. ನಾವು ಈಗಲೇ ಎಚ್ಚೆತ್ತುಕೊಂಡು ಒಟ್ಟಾಗಿ ಕೆಲಸ ಮಾಡದಿದ್ದರೆ, ನಮ್ಮ ಅಸ್ತಿತ್ವವೇ ಅಪಾಯಕ್ಕೆ ಸಿಲುಕಲಿದೆ. ನಾವು ಚರ್ಚೆಯ ಮೇಜಿನ ಬಳಿ ಇಲ್ಲದಿದ್ದರೆ, ನಾವು ಇತರರ ಮೆನುವಿನಲ್ಲಿ ಇರುತ್ತೇವೆ,” ಎಂಬ ಮಾರ್ಮಿಕ ಎಚ್ಚರಿಕೆಯನ್ನು ನೀಡಿದ್ದಾರೆ.
ಟ್ರಂಪ್ ಅವರ ಹೊಸ ಭೂಪಟದಲ್ಲಿ ಕೆನಡಾವನ್ನೂ ಅಮೆರಿಕದ ಭಾಗವಾಗಿ ತೋರಿಸಿರುವ ಬೆನ್ನಲ್ಲೇ ಮಾರ್ಕ್ ಕಾರ್ನಿ ಅವರ ಈ ಕಟು ಟೀಕೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿವೆ.


