ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಜಟಾಪಟಿಯ ನಡುವೆಯೇ, ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಆಗಮಿಸಿ ಭಾಷಣ ಮಾಡಲಿದ್ದಾರೆ ಎಂಬ ದೃಢ ವಿಶ್ವಾಸವನ್ನು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ, ರಾಜ್ಯಪಾಲರು ಸರ್ಕಾರದ ಭಾಷಣದ ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. “ನಾವು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ರಾಜ್ಯಪಾಲರಿಗೆ ಮತ್ತೊಮ್ಮೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಅವರು ನೂರಕ್ಕೆ ನೂರರಷ್ಟು ಅಧಿವೇಶನಕ್ಕೆ ಬಂದು ಭಾಷಣ ಮಾಡುತ್ತಾರೆಂಬ ನಿರೀಕ್ಷೆ ನಮಗಿದೆ” ಎಂದು ಅವರು ತಿಳಿಸಿದರು.
ಸಾಂವಿಧಾನಿಕ ನಿಯಮಗಳನ್ನು ನೆನಪಿಸಿದ ಪೊನ್ನಣ್ಣ, “ರಾಜ್ಯಪಾಲರು ಎಂದರೆ ಸ್ವತಂತ್ರ ಸಂಸ್ಥೆಯಲ್ಲ, ಅವರು ಸರ್ಕಾರದ ಭಾಗ. ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸುವುದು ಅವರ ಜವಾಬ್ದಾರಿ. ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಂಡರೆ ಇಲ್ಲಿ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಈ ಬಿಕ್ಕಟ್ಟಿನ ನಡುವೆಯೇ ಸರ್ಕಾರದ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದ ಅವರು, “ಅಡ್ವೊಕೇಟ್ ಜನರಲ್ (AG) ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಅಲ್ಲಿನ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ನಾವು ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ” ಎಂದರು.
ರಾಜ್ಯಪಾಲರ ಮನವೊಲಿಸಲು ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ತಂಡ ಲೋಕಭವನಕ್ಕೆ ಭೇಟಿ ನೀಡುತ್ತಿದೆ. ನಾಯಕರ ಭೇಟಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಲೋಕಭವನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ರಾಜ್ಯಪಾಲರು ಸರ್ಕಾರದ ನಿಲುವಿಗೆ ಒಪ್ಪಿಗೆ ಸೂಚಿಸಿ ಅಧಿವೇಶನಕ್ಕೆ ಬರುತ್ತಾರೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.


