ರಾಮನಗರ: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ಣವಾಗಿ ಓದದೆ ಮೊಟಕುಗೊಳಿಸಿರುವ ವಿಚಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರದಲ್ಲಿರುವ ಸರ್ಕಾರ ಸಿದ್ಧಪಡಿಸಿಕೊಡುವ ಭಾಷಣವನ್ನೇ ರಾಜ್ಯಪಾಲರು ಓದುವುದು ಸಂಪ್ರದಾಯ. ಎಲ್ಲಾ ರಾಜ್ಯಗಳಲ್ಲೂ ಇದೇ ಪದ್ಧತಿ ಇದೆ. ಆದರೆ, ರಾಜ್ಯಪಾಲರು ಕೇವಲ ಐದು ನಿಮಿಷ ಭಾಷಣ ಓದಿ ನಿರ್ಗಮಿಸಿರುವುದು ಸರಿಯಲ್ಲ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ, ಅವರು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು” ಎಂದು ಎಚ್ಚರಿಸಿದರು.
ರಾಜ್ಯ ಬಿಜೆಪಿಯ ನಿಲುವನ್ನು ಟೀಕಿಸಿದ ರೆಡ್ಡಿ, “ರಾಜ್ಯಪಾಲರು ಸ್ವತಂತ್ರವಾಗಿ ಕೆಲಸ ಮಾಡಲು ಬಿಜೆಪಿ ಬಿಡುತ್ತಿಲ್ಲ. ಕೇಂದ್ರದ ತಾಳಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯವರು ಕುಣಿಯುತ್ತಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಇವರು ಧ್ವನಿ ಎತ್ತುತ್ತಿಲ್ಲ. ಹಿಂದೆ ಇವರೇ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದರು, ಸ್ಪೀಕರ್ ಮೇಲೆ ಪತ್ರ ಎಸೆದಿದ್ದರು. ಇಂತಹವರಿಂದ ನಾವು ನೀತಿ ಕಲಿಯುವ ಅಗತ್ಯವಿಲ್ಲ” ಎಂದು ಗುಡುಗಿದರು.
“ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಇದೇ ರೀತಿ ವರ್ತಿಸುತ್ತಿದೆ. ರಾಜ್ಯಪಾಲರಿಗೆ ಯಾವುದಾದರೂ ಅಂಶ ಇಷ್ಟವಾಗದಿದ್ದರೆ ಆ ಸಾಲನ್ನು ಬಿಟ್ಟು ಉಳಿದಿದ್ದನ್ನು ಓದಬಹುದಿತ್ತು. ಆದರೆ ಸಂಪೂರ್ಣ ಭಾಷಣವನ್ನೇ ಮೊಟಕುಗೊಳಿಸುವುದು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಕೆಲಸ. ಕೇಂದ್ರ ಹೇಳಿದ್ದಕ್ಕೆಲ್ಲಾ ‘ಜೈ’ ಎನ್ನುವ ರಾಜ್ಯಗಳಲ್ಲಿ ಇಂತಹ ಸಮಸ್ಯೆ ಇಲ್ಲ” ಎಂದು ಅವರು ಮಾರ್ಮಿಕವಾಗಿ ಹೇಳಿದರು.


