ಕೊಪ್ಪಳ: ನಾನು ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ರೂಪಿಸಿದ್ದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನೇ ಸರ್ಕಾರ ನಿಲ್ಲಿಸಿದೆ. ಈಗ ಅದರ ಮೆಚ್ಯೂರಿಟಿ ಹಣ ಕೊಡಲು ದುಡ್ಡು ಇಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ. ಆದರೂ ನಾನು ಬಿಡುವುದಿಲ್ಲ, ಹೋರಾಟ ಮಾಡಿಯಾದರೂ ಭಾಗ್ಯಲಕ್ಷ್ಮಿ ಬಾಂಡ್ ಹಣವನ್ನು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಳ್ಳಾರಿಯ ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಎರಡನೇ ದಿನವೂ ಅಬ್ಬರದ ಪ್ರಚಾರ ನಡೆಸಿದ ಅವರು ತಾರಾನಗರ, ಬನ್ನಿಹಟ್ಟಿ, ತಾಳೂರು ಗ್ರಾಮಗಳ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಪ್ರತಿ ಕುಟುಂಬಕ್ಕೆ ಆಧಾರವಾದ ಯೋಜನೆ. ಹೆಣ್ಣು ಮಗು ಜನನದ ವೇಳೆ ಮೂಗು ಮುರಿಯುತ್ತಿದ್ದವರು ಈ ಯೋಜನೆ ಜಾರಿಯಿಂದ ನಿಶ್ಚಿಂತರಾಗಿದ್ದರು. ಸಾವಿರಾರು ಕುಟುಂಬಗಳು ಈಗ ಮೆಚ್ಯೂರಿಟಿ ಹಣಕ್ಕಾಗಿ ಕಾಯುತ್ತಿವೆ ಎಂದರು.
ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದ ರೈತರಿಗೆ ವರವಾಗಿತ್ತು. ಮೋದಿ ಸರ್ಕಾರ 6 ಸಾವಿರ ರೂ., ರಾಜ್ಯ ಸರ್ಕಾರ 4 ಸಾವಿರ ರೂ. ಸೇರಿ 10 ಸಾವಿರ ರೂ. ಹಣವನ್ನು ರೈತರಿಗೆ ನೀಡುತ್ತಿತ್ತು. ಇದು ರೈತರ ಬಿತ್ತನೆ, ರಸಗೊಬ್ಬರ ಸೇರಿ ಕೃಷಿ ಚಟುವಟಿಕೆಗೆ ಅನುಕೂಲವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಯೋಜನೆ ನಿಲ್ಲಿಸಿದೆ. ಇದು ಸಿದ್ದರಾಮಯ್ಯ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಲುಕಿ ನರಳಾಡುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ನಿಮ್ಮ ಯಾವ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಸಿಎಂಗೆ ಉಪಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ಹಣ, ಅಧಿಕಾರ, ಹೆಂಡವನ್ನು ಕೊಟ್ಟು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟಿದ್ದಾರೆ. ಆದರೆ ರಾಜ್ಯದ ಜನರು ಪ್ರಜ್ಞಾವಂತರಾಗಿದ್ದಾರೆ. ನಿಮ್ಮ ತೋಳ್ಬಲ, ಹಣದ ಬಲ ನಡೆಯುವುದಿಲ್ಲ. ಸಂಡೂರು ಸೇರಿ ರಾಜ್ಯದ ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಜಯ ಸಾಧಿಸಲಿದ್ದಾರೆ ಎಂದು ಹೇಳಿದರು.