ಗದಗ: “ಪ್ರಾಮಾಣಿಕತೆಯೇ ನಿಜವಾದ ಸಂಪತ್ತು” ಎಂಬ ಮಾತಿಗೆ ಗದಗ ಜಿಲ್ಲೆಯ ಲಕ್ಕುಂಡಿಯ ರಿತ್ತಿ ಕುಟುಂಬ ಸಾಕ್ಷಿಯಾಗಿದೆ. ಮನೆ ಪಾಯ ಅಗೆಯುವಾಗ ಸಿಕ್ಕ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಈ ಕುಟುಂಬಕ್ಕೆ, 77ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭರ್ಜರಿ ಉಡುಗೊರೆ ಘೋಷಿಸಿದೆ.
ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರದ ಪರವಾಗಿ ಸನ್ಮಾನಿಸಿ, ವಿಶೇಷ ಪ್ಯಾಕೇಜ್ ಘೋಷಿಸಿದರು.
ಸರ್ಕಾರ ಘೋಷಿಸಿದ ‘ಬಂಪರ್’ ಕೊಡುಗೆಗಳು:
ನಿವೇಶನ: ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ವಾಸಿಸಲು 30×40 ಅಳತೆಯ ನಿವೇಶನ ಮಂಜೂರು.
ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂಪಾಯಿ ನಗದು ಸಹಾಯಧನ.
ಪ್ರಜ್ವಲ್ ತಾಯಿ ಕಸ್ತೂರೆವ್ವ ರಿತ್ತಿ ಅವರಿಗೆ ಹೊರಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಿ ಆದೇಶ ಪತ್ರ ವಿತರಣೆ.
ಜನವರಿ 10ರಂದು ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುತ್ತಿದ್ದಾಗ ಸುಮಾರು 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳಿದ್ದ ತಂಬಿಗೆ ಪತ್ತೆಯಾಗಿತ್ತು. ಇಂದಿನ ಕಾಲದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ಸಿಕ್ಕರೆ ಬಚ್ಚಿಡುವವರೇ ಹೆಚ್ಚು. ಆದರೆ, ಪ್ರಜ್ವಲ್ ರಿತ್ತಿ ಮತ್ತು ಅವರ ತಾಯಿ ಕಸ್ತೂರೆವ್ವ ಅವರು ಕಿಂಚಿತ್ತೂ ಲಾಲಸೆಗೆ ಒಳಗಾಗದೆ, ಈ ಐತಿಹಾಸಿಕ ನಿಧಿಯನ್ನು ತಕ್ಷಣವೇ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
ಲಕ್ಕುಂಡಿಯ ಐತಿಹಾಸಿಕ ನಂಟು
ಚಾಲುಕ್ಯರ ಕಾಲದ ವೈಭವಕ್ಕೆ ಹೆಸರಾದ ಲಕ್ಕುಂಡಿ ಗ್ರಾಮವು ಪುರಾತತ್ವ ಇಲಾಖೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ತಾಣವಾಗಿದೆ. ಮಧ್ಯಯುಗೀನ ಕಾಲದಲ್ಲಿ ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದರಿಂದ ಇಲ್ಲಿ ಅಂದಿನ ಕಾಲದ ನಾಣ್ಯಗಳು ಮತ್ತು ಆಭರಣಗಳು ಭೂಗತವಾಗಿರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಿತ್ತಿ ಕುಟುಂಬದ ಈ ಪ್ರಾಮಾಣಿಕ ನಡೆಯಿಂದಾಗಿ ಈಗ ಆ ಭಾಗದಲ್ಲಿ ಹೆಚ್ಚಿನ ಉತ್ಖನನ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದೆ.


