#Exclusive NewsTop News

ಪ್ರಯಾಣಿಕರಿಗೆ ಗುಡ್​ ನ್ಯೂಸ್​: 100 ಹೊಸ ಬಿಎಂಟಿಸಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ

 

ಬಸ್​ ಪ್ರಯಾಣಿಕರಿಗೆ ಸರ್ಕಾರ ಗುಡ್​ ನ್ಯೂಸ್​ ನೀಡಿದ್ದು, ಬಿಎಂಟಿಸಿ(BMTC)ಗೆ ಹೊಸದಾಗಿ 840 ಬಸ್​​ಗಳು ಸೇರ್ಪಡೆಯಾಗಲಿವೆ. ಮೊದಲ ಹಂತದಲ್ಲಿ ಬಿಎಂಟಿಸಿ 100 ಹೊಸ ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯಅವರು ಇಂದು (ಗುರುವಾರ) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದರು.

ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ ಬಸ್​ಗಳನ್ನು BMTC ಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್​ಗಳನ್ನು ಆರಂಭಿಸಿದ್ದಲ್ಲದೆ ನೂತನವಾಗಿ ಇನ್ನಷ್ಟು ಕ್ಯಾಂಟೀನ್​ಗಳನ್ನು ಆರಂಭಿಸುತ್ತಿದ್ದೇವೆ. ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದರು.

ಶಕ್ತಿ ಮಧ್ಯೆಯೂ ಬಿಎಂಟಿಸಿಗೆ ಭರ್ಜರಿ ಆದಾಯ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ

ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ, ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ. ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ. ನಾವು ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಮುಂದಾದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೆ ತೊಂದರೆ ನೀಡಿತು. ಆದರೆ, ನಾವು ಅಕ್ಕಿಯ ಬದಲಿಗೆ, ಅಕ್ಕಿಯ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.‌ರಾಜ್ಯದ ಪ್ರತೀ ಕುಟುಂಬಗಳಿಗೆ ಪ್ರತೀ ತಿಂಗಳಿಗೆ 4 ರಿಂದ 5 ಸಾವಿರ ರೂಪಾಯಿ ಅನುಕೂಲ ಆಗುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್​ಗಳನ್ನು‌ ಖರೀದಿಸಿ ಸವಲತ್ತು ಒದಗಿಸಿದ್ದೇವೆ ಎಂದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹಮದ್, ಇಂಧನ ಸಚಿನ ಕೆ.ಜೆ.ಜಾರ್ಜ್, ಕೆಕೆಆರ್​ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button