ವೈರಲ್ ನ್ಯೂಸ್ಸುದ್ದಿಹಣಕಾಸು

ರೇಸ್ ಮುಗಿಸದ ‘ಚಿನ್ನ’ಮ್ಮ! ಕಾದು ಸುಸ್ತಾದ ಜನ

ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಸೋಮವಾರವೂ ತನ್ನ ಭೇಟೆ ಮುಂದುವರಿಸಿದ್ದು, ಆಭರಣ ಪ್ರಿಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರವು ಗಗನಕ್ಕೇರಿದ್ದು, ಪ್ರತಿ ಗ್ರಾಮ್ ಚಿನ್ನಕ್ಕೆ ಸುಮಾರು 205 ರೂಪಾಯಿಗಳಷ್ಟು ಏರಿಕೆಯಾಗಿದೆ.

ಈ ದಿಢೀರ್ ಬೆಳವಣಿಗೆಯಿಂದಾಗಿ ಅಪರಂಜಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್‌ಗೆ 1.60 ಲಕ್ಷ ರೂಪಾಯಿಗಳ ಗಡಿಯ ಸಮೀಪಕ್ಕೆ ಬಂದು ತಲುಪಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.ಭಾರತದಲ್ಲಿ 22 ಕ್ಯಾರಟ್‌ನ ಆಭರಣ ಚಿನ್ನದ ಬೆಲೆಯು ಹತ್ತು ಗ್ರಾಮ್‌ಗೆ 1,45,600 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆಯು ಬರೋಬ್ಬರಿ 1,58,840 ರೂಪಾಯಿಗಳ ದಾಖಲೆ ಮಟ್ಟವನ್ನು ಮುಟ್ಟಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿಯೂ ಇದೇ ದರ ಅನ್ವಯವಾಗುತ್ತಿದ್ದು, ಮದುವೆ ಹಾಗೂ ಸಮಾರಂಭಗಳಿಗಾಗಿ ಚಿನ್ನ ಕೊಳ್ಳಲು ಕಾದಿದ್ದ ಕುಟುಂಬಗಳಿಗೆ ಈ ಬೆಲೆ ಏರಿಕೆಯು ದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಬಂಗಾರದ ಜೊತೆಜೊತೆಗೆ ಬೆಳ್ಳಿ ಬೆಲೆಯೂ ಸಹ ಭಾರಿ ಜಿಗಿತವನ್ನು ಕಂಡಿದೆ. ಬೆಳ್ಳಿಯ ಬೆಲೆಯು ಪ್ರತಿ ಗ್ರಾಮ್‌ಗೆ 15 ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ ಒಂದು ಗ್ರಾಮ್ ಬೆಳ್ಳಿ 300 ರೂಪಾಯಿಗಳ ಮೈಲಿಗಲ್ಲನ್ನು ತಲುಪಿದೆ. 100 ಗ್ರಾಮ್ ಬೆಳ್ಳಿಯ ಬೆಲೆಯು ಈಗ 30,000 ರೂಪಾಯಿಗಳಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆಯು ಬರೋಬ್ಬರಿ ಮೂರು ಲಕ್ಷ ರೂಪಾಯಿಗಳ ಗಡಿಯನ್ನು ತಲುಪಿದಂತಾಗಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು ಮತ್ತು ಕೇರಳದ ವಿವಿಧ ಭಾಗಗಳಲ್ಲಿಯೂ ಬೆಳ್ಳಿಯ ದರ ಇದೇ ಮಟ್ಟದಲ್ಲಿ ಮುಂದುವರಿಯುತ್ತಿದೆ.

ಕೆಲವೇ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಂಡಿರುವ ಈ ಭಾರಿ ಏರಿಕೆಯು ಆಭರಣ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button