ಚಿಕ್ಕಮಗಳೂರು: ಇನ್ನೂ ಕಾನೂನಾಗಿ ಜಾರಿಯಾಗದ ‘ದ್ವೇಷ ಭಾಷಣ ಮಸೂದೆ-2025’ರ ಅಡಿಯಲ್ಲಿ ಹಿಂದೂ ಮುಖಂಡರಿಗೆ ಪೊಲೀಸರು ನೋಟಿಸ್ ನೀಡುತ್ತಿರುವುದಕ್ಕೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಧೈರ್ಯವಿದ್ದರೆ ಜಾಗತಿಕ ಭಯೋತ್ಪಾದನೆಗೆ ಪ್ರೇರಣೆ ನೀಡಿ, ಮಕ್ಕಳ ಕೈಗೆ ಕಲ್ಲು ಕೊಟ್ಟು ದೇವರಿಗೆ ಹೊಡೆಸುತ್ತಿರುವವರಿಗೆ ನೋಟಿಸ್ ನೀಡಿ,” ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ತರೀಕೆರೆಯ ಹಿಂದೂ ಸಮಾಜೋತ್ಸವದ ಭಾಷಣಕಾರ ವಿಕಾಸ್ ಪುತ್ತೂರು ಅವರಿಗೆ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಸಿ.ಟಿ. ರವಿ, ಅಂಬೇಡ್ಕರ್ ಅವರು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಸರ್ಕಾರ ಸಂಕೋಲೆ ತೊಡಿಸಲು ಹೊರಟಿದೆ. ತುರ್ತು ಪರಿಸ್ಥಿತಿ ಹೇರಿ ಹಕ್ಕುಗಳನ್ನು ಧಮನ ಮಾಡಿದ ಇತಿಹಾಸವಿರುವ ಕಾಂಗ್ರೆಸ್ ಈಗ ಜನರ ಬಾಯಿಗೆ ಬೀಗ ಹಾಕಲು ಮುಂದಾಗಿದೆ.
ಕಾನೂನಿನ ಅರಿವಿಲ್ಲದ ಪೊಲೀಸರಿಗೆ ಅರಿವು ಮೂಡಿಸಬೇಕಿದೆ. ಇನ್ನೂ ರಾಜ್ಯಪಾಲರ ಅಂಕಿತವೇ ಬೀಳದ ಕಾಯ್ದೆಯನ್ನು ಜಾರಿಗೆ ತರಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಸರ್ಕಾರದ ಈ ನಡೆ ರಾಜ್ಯದ ಹಿಂದೂಗಳಲ್ಲಿ ತಲ್ಲಣ ಮೂಡಿಸಿದೆ ಎಂದು ಅಭಿಪ್ರಾಯಪಟ್ಟ ಅವರು, ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಸತ್ಯ ಹೇಳುವುದನ್ನು ಯಾವತ್ತೂ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಈಗಾಗಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರು ಪೊಲೀಸರ ನಡೆಯನ್ನು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. “ರಾಜ್ಯಪಾಲರ ಅಂಕಿತ ಬೀಳುವ ಮೊದಲೇ ಆ ಕಾಯ್ದೆಯನ್ನು ಉಲ್ಲೇಖಿಸಿ ನೋಟಿಸ್ ಕೊಟ್ಟಿದ್ದು ತಪ್ಪು, ಬಿಎನ್‌ಎಸ್ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು,” ಎಂದು ಅವರು ನೀಡಿರುವ ಹೇಳಿಕೆಯನ್ನು ಸಿ.ಟಿ. ರವಿ ಉಲ್ಲೇಖಿಸಿದರು.


